'ಸಂಸ್ಕೃತಿ ಬೆಳೆಸಲು ಗ್ರಾಮೀಣ ದಸರಾ ಸಹಕಾರಿ'
ಕ.ಪ್ರ.ವಾರ್ತೆ , ಟಿ.ನರಸೀಪುರ , ಸೆ. 29
ಗ್ರಾಮೀಣ ಪ್ರದೇಶದ ಜನರಲ್ಲಿನ ಕಲೆ, ಸಂಸ್ಕೃತಿ ಹಾಗೂ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳೆಸಲು ಗ್ರಾಮೀಣ ದಸರಾ ಸೂಕ್ತ ವೇದಿಕೆಯಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತಿಚೀನ ದಿನಗಳಲ್ಲಿ ಗ್ರಾಮೀಣ ಜನರು ಕೂಡ ನಮ್ಮ ಸಂಸ್ಕೃತಿಯ ಪರಂಪರೆಗಳನ್ನು ಮರೆಯುತ್ತಿದ್ದು, ಕ್ರಿಕೆಟ್‌ನಂತಹ ಆಧುನಿಕ ಕ್ರೀಡೆಗಳಿಗೆ ಮನಸೋತು ಆರೋಗ್ಯ ಮತ್ತು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಗ್ರಾಮೀಣ ಸಂಸ್ಕೃತಿ ಉಳಿಸಲು ಈ ದಸರಾ ಪೂರಕವಾಗಿದೆ ಎಂದರು.
ಹಿಂದಿನ ರಾಜ್ಯ ಸರ್ಕಾರಗಳು ಗ್ರಾಮೀಣ ದಸರಾವನ್ನು ಮೈಸೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ವಿಸ್ತರಿಸಿದರೆ, ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ನೆರೆಯ ಗಡಿ ಜಿಲ್ಲೆ ಚಾಮರಾಜನಗರಕ್ಕೂ ಗ್ರಾಮೀಣ ದಸರಾದ ಕಂಪನ್ನು ವಿಸ್ತರಣೆ ಮಾಡಿದ್ದಾರೆ ಎಂದರು.
ಮೈಸೂರು ರಸ್ತೆ ವಿಸ್ತರಣೆಗೆ ಕ್ರಮ: ವಾಹನಗಳ ಸಂಚಾರದ ದಟ್ಟಣೆಯಿಂದ ಹೆಚ್ಚಿನ ಸಾವು ನೋವುಗಳು ಸಂಭವಿಸುತ್ತಿರುವ ಮೈಸೂರು- ಟಿ. ನರಸೀಪುರ ಮುಖ್ಯ ರಸ್ತೆಯ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಮುಖ ರಾಷ್ಟ್ರೀಯ ಹೆದ್ಧಾರಿ 212 ನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಈಗಿರುವ ರಸ್ತೆ ಹತ್ತು ಮೀಟರ್‌ನಷ್ಟು ಅಗಲಕ್ಕೆ ವಿಸ್ತರಣೆಯಾಗಲಿದೆ. ಕಪಿಲಾ ನದಿಗೆ ನೂತನವಾಗಿ ನಿರ್ಮಾಣವಾಗಿರುವ ಸೇತುವೆಯನ್ನು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರನ್ನು ಆಹ್ವಾನಿಸಿ ಸದ್ಯದಲ್ಲಿಯೇ ಉದ್ಘಾಟನೆಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಆದಿದೇವತೆ ಶ್ರೀ ಚಾಮುಂಡೇಶ್ವರಿಗೆ ಹಾಗೂ ನಂದಿಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು ಮೆರವಣಿಗೆಗೆ ಚಾಲನೆ ನೀಡಿದರು. ವೀರಗಾಸೆ, ಸೋಬಾನೆ ಪದ, ಕಳಸ ಹೊತ್ತ ಮಹಿಳೆಯರು, ಕಂಸಾಳೆ ಕುಣಿತ, ಡೊಳ್ಳು ಕುಣಿತ, ಮಂಗಳ ವಾದ್ಯ, ತಮಟೆ ಕುಣಿತ ವಿವಿಧ ಕಲಾ ತಂಡಗಳು ಉತ್ಸವಕ್ಕೆ ಕಳೆ ತಂದವು. ಸಮಾರಂಭದಲ್ಲಿಯೂ ವಿದ್ಯಾರ್ಥಿಗಳ ನೃತ್ಯ, ಯೋಗ ಪ್ರದರ್ಶನ ನೆರೆದಿದ್ದ ಜನರಿಗೆ ಮನರಂಜನೆ ನೀಡಿತು.
ಗಮನ ಸೆಳೆದ ವಿದ್ಯಾರ್ಥಿಗಳು: ಸರ್ಕಾರದ ವಿವಿಧ ಯೋಜನೆಗಳಾದ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ, ಪಂಚಾಯತ್ ರಾಜ್ ವ್ಯವಸ್ಥೆಯ ಉದ್ಯೋಗ ಖಾತ್ರಿ ಯೋಜನೆ, ಕೃಷಿ ಇಲಾಖೆಯ ಮಣ್ಣು ಫಲವತ್ತತೆ ಕುರಿತ ಮಾಹಿತಿ, ಅಭಿವೃದ್ಧಿಯ ತೋಟಗಾರಿಕೆ ವಿವಿಧ ಹಣ್ಣು ಹಂಪಲುಗಳ ಛಾಯಾಚಿತ್ರ, ಟೌನ್ ಪಂಚಾಯಿತಿಯ ಪರಿಸರ ನೈರ್ಮಲ್ಯ ಪಡೆವ ಚಿತ್ರ, ಸಮಾಜ ಕಲ್ಯಾಣ ಇಲಾಖೆಯ ಎಸ್ಸಿ, ಎಸ್ಟಿ ಸಮುದಾಯದ ಕಲ್ಯಾಣಕ್ಕೆ ರೂಪಿಸಿದ ಯೋಜನೆಗಳು, ಆರಣ್ಯ ಇಲಾಖೆಯಿಂದ ಅರಣ್ಯ ಮತ್ತು ಪ್ರಾಣಿ ಸಂರಂಕ್ಷಣಾ ಜಾಗೃತಿ ಮಾಹಿತಿ ಸೇರಿದಂತೆ ಹಲವು ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಪಟ್ಟಣದ ಪ್ರಮುಖ ಶಾಲೆಗಳ ವಿದ್ಯಾರ್ಥಿಗಳು ಸ್ಕೌಟ್ ಮತ್ತು ಗೈಡ್ಸ್‌ನ ಸಮವಸ್ತ್ರ ಧರಿಸಿ ಬ್ಯಾಂಡ್‌ಗಳ ನಾದ ಹಾಗೂ ನೃತ್ಯಗಳು ಸಾರ್ವಜನಿಕರ ಗಮನ ಸೆಳೆದವು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದ ನಂತರ ವಿದ್ಯೋದಯ ಕಾಲೇಜು ಆವರಣದಲ್ಲಿ ಸಮಾವೇಶಗೊಂಡಿತು.
ಗ್ರಾಮೀಣ ದಸರಾ ಉಪ ಸಮಿತಿ ಕಾರ್ಯಧ್ಯಕ್ಷ ಕೋಟೆಹುಂಡಿ ಮಹದೇವು, ಜಿಪಂ ಉಪಾಧ್ಯಕ್ಷೆ ಎಸ್.ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ, ಜಿಪಂ ಸದಸ್ಯರಾದ ರೇಣುಕಾ ನಾಗರಾಜು, ಎಂ.ಸುಧಾ ಮಹದೇವಯ್ಯ, ತಾಪಂ ಅಧ್ಯಕ್ಷ ತುಂಬಲ ಅಂದಾನಿ, ಸದಸ್ಯರಾದ ಸುವರ್ಣಪ್ರಸನ್ನ, ನಸ್ರಿನ್‌ರೂಹಿ, ಗುರುಮೂರ್ತಿ, ಬಸವರಾಜು, ರೂಪಶ್ರೀ, ಶಿವಮ್ಮ ಮಹದೇವ, ಪುಟ್ಟಮಾದಮ್ಮ ನಾಗರಾಜು, ಕಾರ್ಯನಿರ್ವಾಹಕ ಅಧಿಕಾರಿ ಜೆ. ಕೃಷ್ಣ, ಎಎಸ್ಪಿ ರಾಜಾ, ತಹಸೀಲ್ದಾರ್ ಅರುಣಾಪ್ರಭಾ, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ದೈಹಿಕ ಪರಿವೀಕ್ಷಣಾಧಿಕಾರಿ ಸಂಪತ್ ದೊರೆರಾಜ್, ಸಿಪಿಐ ಕೆ.ಎಸ್. ಸುಂದರ್‌ರಾಜ್, ಸಬ್‌ಇನ್ಸ್‌ಪೆಕ್ಟರ್ ಕೆ.ಆರ್. ಗೋಪಿಕೃಷ್ಣ ಇತರರಿದ್ದರು.
ಜಪ್ರತಿನಿಧಿ ಕಡೆಗಣನೆ ಆಕ್ರೋಶ
ಪಟ್ಟಣದಲ್ಲಿ ಭಾನುವಾರ ನಡೆದ ಗ್ರಾಮೀಣ ದಸರಾ ಉತ್ಸವದಲ್ಲಿ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ ಘಟನೆ ನಡೆಯಿತು.
ಗ್ರಾಮೀಣ ದಸರಾ ಉತ್ಸವದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರ ಹೆಸರನ್ನು ಕೈ ಬಿಟ್ಟು, ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ ಎಂದು ದಸಂಸ ಹಾಗೂ ತಾ.ಪಂ ಸದಸ್ಯರು ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ತಹಸೀಲ್ದಾರರು ಸಾರ್ವಜನಿಕವಾಗಿ ಕ್ಷಮೆ ಕೋರಬೇಕಾಯಿತು. ವಿದ್ಯೋದಯ ಕಾಲೇಜು ಆವರಣದಲ್ಲಿ ಸಮಾರಂಭ ಆರಂಭವಾಗುತ್ತಿದ್ದಂತೆ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್ ಸೇರಿದಂತೆ ಸಂಘಟನೆಯ ಅನೇಕ ಮುಖಂಡರು ತಹಸೀಲ್ದಾರ್ ಅವರ ವಿರುದ್ಧ ಧಿಕ್ಕಾರ ಕೂಗುತ್ತಾ ಪ್ರತಿಭಟನೆ ಆರಂಭಿಸಿದರು. ನಂತರ ಸಮಾರಂಭದ ಉದ್ಘಾಟನೆ ವೇಳೆ ತಾಪಂ ಅನೇಕ ಸದಸ್ಯರಾದ ಬಸವರಾಜು, ಮಲ್ಲಾಜಮ್ಮ, ರೂಪಶ್ರೀ ಪರಮೇಶ, ನಾಗರತ್ನಮ್ಮ ಅವರ ಜೊತೆಯಲ್ಲಿ ಅನೇಕರು ಚುನಾಯಿತ ಸದಸ್ಯರಾದ ತಮ್ಮನ್ನು ಸಮಾರಂಭಕ್ಕೆ ಆಹ್ವಾನಿಸದೇ ಅವಮಾನಿಸಲಾಗುತ್ತಿದೆ ಎಂದು ಪ್ರತಿಭಟನೆಗಿಳಿದರು. ಮಾಡಿರುವ ತಪ್ಪಿಗೆ ಬಹಿರಂಗ ಕ್ಷಮೆ ಕೇಳುವಂತೆ ದಸಂಸ ಮುಖಂಡರು ಹಾಗೂ ತಾ.ಪಂ ಸದಸ್ಯರು ಪಟ್ಟುಹಿಡಿದರು. ತಮ್ಮಿಂದಾದ ಪ್ರಮಾದಕ್ಕೆ ತಹಸೀಲ್ದಾರ್ ಎಚ್.ಎಸ್. ಅರುಣಪ್ರಭ ಕ್ಷಮೆ ಕೋರಿದರು. ಮುನಿಸಿಕೊಂಡು ವೇದಿಕೆಯನ್ನೇರದಿದ್ದ ತಾ.ಪಂ ಸದಸ್ಯರನ್ನು ಸಂಸದ ಆರ್.ಧ್ರುವನಾರಾಯಣ ಮನವೊಲಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.