'ಸೋಲು, ಗೆಲವನ್ನು ಸಮಾನವಾಗಿ ಸ್ವೀಕರಿಸಿ'
ಕ.ಪ್ರ.ವಾರ್ತೆ , ಮೈಸೂರು , ಸೆ. 29
ಕ್ರೀಡಾಪಟುಗಳು ಸೋಲು- ಗೆಲವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಡಿಡಿಪಿಯು ಕೆ.ಎಂ. ಪುಟ್ಟು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ, ಮೈಸೂರು ಇನ್ಸ್ಟಿಟ್ಯೂಟ್ ಮಹೇಶ್ ಪದವಿಪೂರ್ವ ಕಾಲೇಜು ಜಂಟಿ ಆಶ್ರಯದಲ್ಲಿ ಮೈಸೂರು ವಿವಿ ಓವಲ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾದದು. ಏಕಾಗ್ರತೆ ಮೂಡಿಸುವ ಮೂಲಕ ವಿದ್ಯಾಭ್ಯಾಸದಲ್ಲೂ ಯಶಸ್ಸು ಸಾಧಿಸಲು ಸಹಾಯಕವಾಗುತ್ತದೆ. ಆರೋಗ್ಯ ಭಾಗ್ಯಕ್ಕಿಂತ ಬೇರೆ ಭಾಗ್ಯ ಮತ್ತೊಂದಿಲ್ಲ ಎಂದರು.
ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೃಷ್ಣ ಮಾತನಾಡಿ, ಪಿಯು ವಿದ್ಯಾರ್ಥಿಗಳು ಪ್ರೌಢಾವಸ್ಥೆ ಮುಗಿಸಿ ಬಂದವರಾಗಿರುತ್ತಾರೆ. ಅಂತಹ ಸಂದರ್ಭದಲ್ಲಿ ಉತ್ಸಾಹದ ಚಿಲುಮೆ, ಲವಲವಿಕೆ ಅವರಲ್ಲಿರುತ್ತದೆ. ಇದನ್ನು ಸರಿಯಾಗಿ ಬಳಸಿಕೊಂಡರೆ ಸಾಧನೆ ಮಾಡಬಹುದು. ದೇಶದ ಅಭಿವೃದ್ಧಿಯಲ್ಲಿ ಯುವ ಸಮಾಜದ ಪಾತ್ರ ಬಹಳ ದೊಡ್ಡದಿದೆ ಎಂದು ಅಭಿಪ್ರಾಯಪಟ್ಟರು.
ಪಪೂ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ನಂಜುಂಡಸ್ವಾಮಿ, ಮೈಸೂರು ಇನ್ಸ್ಟಿಟ್ಯೂಟ್ ಮಹೇಶ್ ಪ್ರಾಂಶುಪಾಲ ಎಂ.ಎನ್. ಪೊನ್ನಪ್ಪ ಇದ್ದರು.