ಕನ್ನಡ ಉಳಿಸುವ ಕೆಲಸ ನಮ್ಮ ಮೇಲಿದೆ: ಮಂಡ್ಯ ರಮೇಶ್
ಕ.ಪ್ರ.ವಾರ್ತೆ , ಮೈಸೂರು , ಸೆ. 30
ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ನಮ್ಮಿಂದಾಗಬೇಕು ಎಂದು ನಟ ಮಂಡ್ಯ ರಮೇಶ್ ಹೇಳಿದರು.
ಸೋಮವಾರ ಕಲಾಮಂದಿರದ ಮನೆಯಂಗಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಕಾವಲುಪಡೆಯ ಧ್ವನಿಸುರುಳಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದು ಕನ್ನಡವನ್ನು ಪುಸ್ತಕದ ಭಾಷೆಯನ್ನಾಗಿ ಪರಿಗಣಿಸಲಾಗುತ್ತಿದೆ. ಇದು ಕೇವಲ ಪುಸ್ತಕ ಭಾಷೆಯಲ್ಲ. ಕನ್ನಡಿಗರ ಜೀವನಾಡಿ. ಕನ್ನಡ ಸಂಪತ್ತನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೊಂದಿಗೆ ಕನ್ನಡಪರ ಸಂಘಟನೆಗಳ ಮೇಲೂ ಇದೆ ಎಂದರು.
ಕರ್ನಾಟಕದ ನೆಲ, ಜಲ ಹಾಗೂ ಸಂಪನ್ಮೂಲ ಜಾಗತೀಕರಣದ ಭರಾಟೆಗೆ ಸಿಲುಕಿ ನಾಶವಾಗುತ್ತಿದೆ. ದೇಶಿಯತೆಯೂ ಅಳಿವಿನಂಚಿನಲ್ಲಿದೆ. ಕನ್ನಡ ವಿಜೃಂಭಿಸಬೇಕಾದ ಜಾಗದಲ್ಲಿ ಇತರೆ ಭಾಷೆಗಳು ರಾರಾಜಿಸುತ್ತಿವೆ. ಹೆಗ್ಗಿಲ್ಲದೇ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕನ್ನಡದಲ್ಲಿ ಕಲಿಯಬೇಕಾದ ಮಕ್ಕಳು ಕಾನ್ವೆಂಟ್ ಸೇರುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಮದ್ದೂರು ಆರ್.ಕೆ. ವಿದ್ಯಾಸಂಸ್ಥೆ ಕಾರ್ಯಾಧ್ಯಕ್ಷ ಎನ್.ಪ್ರಸನ್ನ, ಸಾಹಿತಿ ಡಾ.ಹಿ.ಶಿ. ರಾಮಚಂದ್ರೇಗೌಡ, ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್ ಕುಮಾರ್ಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಟಿ. ಸತೀಶ್ಗೌಡ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಉಮೇಶ್ ಇದ್ದರು.