ಕಾಡಾದಿಂದ ಸಂಚಾರಿ ತರಬೇತಿ ಕಾರ್ಯಕ್ರಮ
ಕ.ಪ್ರ.ವಾರ್ತೆ , ಮೈಸೂರು , ಸೆ. 30
ಸಂತೇಮರಹಳ್ಳಿ ಕಾಡಾ ಉಪವಿಭಾಗದಿಂದ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಸಂಚಾರಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕಬಿನಿ ಯೋಜನಾ ಮಟ್ಟದ ಮಹಾಮಂಡಳದ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ನೀರಿನ ಸದ್ಭಳಕೆ ಮಾಡಿಕೊಂಡು ಹೆಚ್ಚು ಆದಾಯ ಬರುವ ಅರೇ ನೀರಾವರಿ ಬೆಳೆಗಳನ್ನು ಬೆಳೆಯುವಂತೆ ಕರೆ ನೀಡಿದರು. ಉಪನ್ಯಾಸಕ ಎಚ್.ಎಂ. ಹೊಂಬಯ್ಯ ಮಾತನಾಡಿ, ರೈತರು ಪೂರ್ಣ ಪ್ರಮಾಣದಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ಸುಧಾರಿತ ತಳಿಗಳನ್ನು ಆಯ್ಕೆ ಮಾಡಿಕೊಂಡು, ಅರೇ ನೀರಾವರಿ ಬೆಳೆಗಳನ್ನು ಬೆಳೆಯುವುದರಿಂದ ನಿರೀಕ್ಷಿತ ಇಳುವರಿ ಪಡೆಯುವುದು. ಮಣ್ಣಿನಲ್ಲಿ ಲಘು ಪೋಷಕಾಂಶ ಕಡಿಮೆಯಾಗುತ್ತಿರುವುದರಿಂದ ಮಣ್ಣಿನ ರಚನೆ ವ್ಯತ್ಯಾಸವಾಗಿ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆ. ಅದರಿಂದ ಮಣ್ಣಿಗೆ ಲಘು ಪೋಷಕಾಂಶಗಳನ್ನು ಸೇರಿಸಿ ಮುಂದಿನ ಪೀಳಿಗೆಗೆ ಆರೋಗ್ಯವಾದ ಮಣ್ಣನ್ನು ಉಳಿಸುವಂತೆ ಕರೆ ನೀಡಿದರು. ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಸಂತೇಮರಹಳ್ಳಿ ಉಪವಿಭಾಗದ ಸಹಾಯಕ ಕೃಷಿ ನಿರ್ದೇಶಕ ಜಿ.ಎ. ರಾಮಮೂರ್ತಿ, ಸಹಕಾರ ಸಂಘದ ಸಹಾಯಕ ನಿಬಂಧಕ ಎಸ್. ಶಿವಸ್ವಾಮಿ, ಕಾಡಾ ಕೃಷಿ ಸಹಾಯಕ ಎಸ್. ಶಿವಲಿಂಗಯ್ಯ, ಸಹಾಯಕ ಕೃಷಿ ಅಧಿಕಾರಿ ಡಿ.ಎಂ. ಮಹದೇವಪ್ಪ, ಸಿ.ಶಿವಪ್ರಕಾಶ್, ಸಂಘದ ಕಾರ್ಯದರ್ಶಿ ಎಸ್. ಸಿದ್ದರಾಜು, ಮಲ್ಲೇಗೌಡ ಇದ್ದರು.