ಮಂಗಳಮುಖಿಯರಿಗೆ ಯೋಗ ತರಬೇತಿ
ಕ.ಪ್ರ.ವಾರ್ತೆ , ಮೈಸೂರು , ಸೆ. 30
ದಸರಾ ಅಂಗವಾಗಿ ಯೋಗ ದಸರಾ ಉಪ ಸಮಿತಿಯವರು ಮಂಗಳಮುಖಿಯರಿಗಾಗಿ ಸೋಮವಾರ ಗುರುಮಂಗಳೆ ಎಂಬ ಯೋಗ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದರು.
ಕೆ.ಆರ್. ಮೊಹಲ್ಲಾ ಆಶೋದಯ ಸಮಿತಿ ಸಭಾಂಗಣದಲ್ಲಿ ಯೋಗ ಗುರು ಡಾ.ರಾಘವೇಂದ್ರ ಪೈ ಅವರು ಮಂಗಳಮುಖಿಯರಿಗೆ ವಿವಿಧ ಯೋಗ ಹೇಳಿಕೊಟ್ಟರು. ಈ ತರಬೇತಿಯಲ್ಲಿ ಆಶೋದಯ, ಆಶ್ರಯ ಹಾಗೂ ಆದರ್ಶ ಸಮಿತಿ ಸದಸ್ಯರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಎಚ್ಐವಿ ಸೋಕಿಂತರು ಪಾಲ್ಗೊಂಡಿದ್ದರು. ಸೂರ್ಯ ನಮಸ್ಕಾರ, ವಕ್ರಾಸನ, ಪದ್ಮಾಸನ, ವಜ್ರಾಸನ, ಓಂಕಾರ ಉಪಾಸನೆ, ಪ್ರನೋಪಾಸನ, ಉದ್ವಾಸನ, ಧ್ಯಾನ ಸೇರಿದಂತೆ ವಿವಿಧ ಯೋಗ ತರಬೇತಿ ನೀಡಿದರು. ಬಳಿಕ ಯೋಗ ಕುರಿತು ಹಾಡೊಂದನ್ನು ಹೇಳಿಕೊಟ್ಟರು. 80 ವರ್ಷದ ಮುದ್ದುಕೃಷ್ಣ ಎಂಬವರು ಯೋಗ ಪ್ರಾತ್ಯಕ್ಷಿಕೆ ನೀಡಿ ಗಮನ ಸೆಳೆದರು.
ತಮಗಾಗಿ ಯೋಗ ತರಬೇತಿ ಆಯೋಜಿಸಿರುವುದಕ್ಕೆ ಮಂಗಳಮುಖಿಯರು ಧನ್ಯವಾದ ಅರ್ಪಿಸಿದರು. ಯೋಗ ದಸರಾ ಉಪಸಮಿತಿಯ ಅಧ್ಯಕ್ಷ ಎಲ್.ಭಾಸ್ಕರ್, ಉಪಾಧ್ಯಕ್ಷ ಎಚ್.ಎಸ್. ರವಿಕುಮಾರ್, ಕಾರ್ಯಾಧ್ಯಕ್ಷರಾದ ಜಿಲ್ಲಾ ಆಯುಶ್ ಅಧಿಕಾರಿ ನಾಗೇಶ್ ಇದ್ದರು.
ಗುರುಯೋಗ: ಶಾಲಾ ಮುಖ್ಯೋಪಾಧ್ಯಾಯರಿಗಾಗಿ ಡಯಟ್ ವಸಂತಮಹಲ್ ಆವರಣದಲ್ಲಿ ಗುರುಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯೋಗಗುರುಗಳಾದ ಸಿಂಧೂರ ನಾಗರಾಜ್, ಧನ್ಯಕುಮಾರ್, ದೇವರಾಜ್ ಅವರು ಶಿಕ್ಷಕರಿಗೆ ಯೋಗ ಮಾರ್ಗದರ್ಶನ ನೀಡಿದರು.