ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಬಡ್ಡಿ ಕೊಡದ್ದಕ್ಕೆ ಬೆಂಕಿ ಇಟ್ಟರು!

Rashmi Kasaragodu
Updated On : 2 Apr 2014, 2:39 am

ಕ.ಪ್ರ.ವಾರ್ತೆ    ಮೈಸೂರು    ಏ. 1
ಹಣ ಪಡೆದು ಸರಿಯಾಗಿ ಬಡ್ಡಿ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ದುಷ್ಕರ್ಮಿಗಳು ಮನೆಯೊಂದಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಇದರಲ್ಲಿ ಒಂದೇ ಕುಟುಂಬದ 7 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಉದಯಗಿರಿಯ ಕೆ.ಎನ್. ಪುರದ ನಿವಾಸಿ ಅಫ್ಸಲ್ ಪಾಷ (30), ಇವರ ಪತ್ನಿ ಸರೀನ್ ತಾಜ್ (28), ಮಕ್ಕಳಾದ ಮಹೆಫುಸ್ (9), ಯೂನಸ್ (6), ಯೂಸಫ್ (5), ಸೈಫ್ (4) ಮತ್ತು ಶೋಯೆಬ್ (3) ಎಂಬವರು ಗಾಯಗೊಂಡಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಟ್ಟಡ ಕೆಲಸ ಮಾಡಿಕೊಂಡಿದ್ದ ಅಫ್ಸಲ್ ಪಾಷ ಪಕ್ಕದ ಮನೆಯವರ ಬಳಿ ಸಾಲ ಪಡೆದಿದ್ದು, ಸರಿಯಾಗಿ ಬಡ್ಡಿ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಕದ ಮನೆಯ ನಿವಾಸಿಗಳು ಅಫ್ಸಲ್ ಮನೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಾರ್ವಜನಿಕರ ಸಹಾಯದಿಂದ ಮನೆಯಲ್ಲಿದ್ದ ದಂಪತಿ ಮತ್ತು ಅವರ 5 ಜನ ಗಂಡು ಮಕ್ಕಳನ್ನು ರಕ್ಷಿಸಿ, ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉದಯಗಿರಿ ಠಾಣೆಯ ಪೊಲೀಸರು, ಆರೋಪಿಗಳಾದ ಹಸೀನಾ, ಜಬೀನಾ, ಆದಿಲ್, ಕೌಸರ್ ಮತ್ತು ಸೈದಾ ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎ.ಎನ್. ರಾಜಣ್ಣ, ದೇವರಾಜ ಉಪ ವಿಭಾಗದ ಎಸಿಪಿ ಬಳಕ್ಕನವರ್,  ಉದಯಗಿರಿ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ಆರ್.ಪಿ. ಅಶೋಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.



ಅಕ್ರಮ ಲೇವಾದೇವಿ ಕಡಿವಾಣಕ್ಕೆ ಆಗ್ರಹ
ಮೈಸೂರು: ನಗರದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಲೇವಾದೇವಿಯನ್ನು ಕಟ್ಟುನಿಟ್ಟಾಗಿ ಮಟ್ಟ ಹಾಕುವಂತೆ ಎಸ್‌ಡಿಪಿಐ ಮುಖಂಡ ಮೊಹಮ್ಮದ್ ಫೈಸಲ್ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಬಡ್ಡಿ ವ್ಯವಹಾರ, ಲೇವಾದೇವಿಯು ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದೆ. ಇದರಿಂದ ಬಡವರು ನರಕಯಾತನೆ ಅನುಭವಿಸುತ್ತಿದ್ದಾರೆ. ಗೂಂಡಾಗಳು ಹಣ ವಸೂಲಿ ಮಾಡುತ್ತಿರುವುದರಿಂದ ಹೆದರಿಕೆಯಿಂದ ಬಡವರು ಹಣ ಕಟ್ಟುತ್ತಿದ್ದಾರೆ. ಕೆಲವರು ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಇದಕ್ಕೆ ಕೆ.ಎನ್. ಪುರದ ಘಟನೆ ಉದಾಹರಣೆಯಾಗಿದೆ. ಹೀಗಾಗಿ, ಅಕ್ರಮ ಲೇವಾದೇವಿ, ಬಡ್ಡಿ ವ್ಯವಹಾರ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement