ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂವಿಧಾನ ತಿಳಿಯದ ಸಂಸದರು

Rashmi Kasaragodu
Updated On : 2 Apr 2014, 2:40 am

ಮೈಸೂರು: ನಮ್ಮಲ್ಲಿ ಸಂವಿಧಾನದ ಗಂಧ-ಗಾಳಿ ಗೊತ್ತಿಲ್ಲದ, ಅದನ್ನು ಅಧ್ಯಯನ ಮಾಡದ ಸಂಸದರು ಇದ್ದಾರೆ ಎಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ವಿಷಾದಿಸಿದರು.
ನೆಲದನಿ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಎಂಜಿನಿಯರಗಳ ಸಂಸ್ಥೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸುಧಾಕರ ಹೊಸಳ್ಳಿ ಅವರ 'ಭಾರತದಲ್ಲಿ ಸಂವಿಧಾನ ಸವಲತ್ತುಗಳು' ಹಾಗೂ 'ಪ್ರಜಾಮಿತಿಗಳ ಮೌಲ್ಯಮಾಪನ' ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.  
ದೇಶವನ್ನು ಆಳುವಂತಹ ಅನೇಕ ಸಂಸದರು ಸಂವಿಧಾನವನ್ನು ಓದಿರುವುದಿಲ್ಲ. ಅಷ್ಟೇ ಯಾಕೆ ನ್ಯಾಯಾಂಗದಲ್ಲಿ ಕಾರ್ಯ ನಿರ್ವಹಿಸುವಂಥವರು ಸಹ ಸಮರ್ಪಕವಾಗಿ ಓದಿ ಅರ್ಥೈಸಿಕೊಂಡಿರುವುದಿಲ್ಲ. ಹೀಗಿರುವಾಗ ಜನಸಾಮಾನ್ಯರು ಸಂವಿಧಾನವನ್ನು ಓದಲು ಆಸಕ್ತಿ ವಹಿಸಲು ಸಾಧ್ಯವೇ ಎಂದ ಅವರು, ಭಾರತದ ಸಂವಿಧಾನವನ್ನು ಒಂದು ಪವಿತ್ರ ಗ್ರಂಥವೆಂದು ಭಾವಿಸಬೇಕು ಎಂದರು.
ಪ್ರಜಾಪ್ರಭುತ್ವ ಎಂದರೇ ಕೇವಲ 5 ವರ್ಷಗಳಿಗೊಮ್ಮೆ ನಮಗೆ ಬೇಕಾದ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದು ಎಂದು ಭಾವಿಸಿರುವುದು ಸರಿಯಲ್ಲ. ಮತದಾನದ ಹಕ್ಕು ನೀಡುವ  ಹಾಗೂ ರಾಜಕೀಯ ಪ್ರಭುತ್ವವನ್ನು ನೀಡಿದರೆ ಸಾಲದು. ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಸಾಧಿಸದಿದ್ದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ತಿಳಿಸಿದರು.
ತಪ್ಪದ ಪಕ್ಷಾಂತರ:  ಈ ಹಿಂದೆ ಯಾವುದೇ ಪಕ್ಷದಲ್ಲಿ ಗೆದ್ದ ರಾಜಕಾರಣಿ 5 ವರ್ಷಗಳ ಕಾಲ ಆ ಪಕ್ಷವನ್ನು ಬಿಡುತ್ತಿರಲಿಲ್ಲ. ಆದರೆ ಇಂದು ಪಕ್ಷಾಂತರ ಕಾಯ್ದೆ ಜಾರಿಗೆ ತಂದಿದ್ದರೂ ಸಹ ಒಂದೇ ಪಕ್ಷದಿಂದ ಗೆದ್ದ ನಂತರ ಆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬೇರೆ ಪಕ್ಷದಿಂದ ಸ್ಪರ್ಧಿಸಿ ಗೆಲ್ಲುವ ಚಾಣಾಕ್ಷತನ ತೋರಿಸುತ್ತಿದ್ದಾರೆ. ಕಾನೂನು ಚಾಪೆ ಕೆಳಗೆ ತೂರಿದರೆ, ರಾಜಕಾರಣಿಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ ಎಂದು ಹೇಳಿದರು.  
ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್ ರಂಗಪ್ಪ ಮಾತನಾಡಿ, ಎಲ್ಲರೂ ಸಂವಿಧಾನಾತ್ಮಕವಾಗಿ ಕೆಲಸ ಮಾಡದೆ ಹೋದರೆ ದೇಶದ ಉದ್ಧಾರ ಅಸಾಧ್ಯ. ಪುಸ್ತಕಗಳ ಓದಿನಿಂದ ಜ್ಞಾನವೃದ್ಧಿ ಸಾಧ್ಯ. ಮೈಸೂರು ವಿವಿಯು ಸಾಹಿತ್ಯ ಪುಸ್ತಕಗಳ ರಚನೆಗೆ ಪ್ರೋತ್ಸಾಹಿಯುತ್ತಾ ಬಂದಿದ್ದು, ಸುಧಾಕರ ಹೊಸಳ್ಳಿ ಅವರು ರಚಿಸುವ ಗ್ರಂಥ ಪ್ರಕಟಣೆಗೂ ಉತ್ತೇಜನ ನೀಡಲಿದೆ ಎಂದರು.
ಕರಾಮುವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಕೃತಿ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ಸಿಪಿಕೆ, ಪ್ರೊ. ಜಿ.ಟಿ. ರಾಮಚಂದ್ರಪ್ಪ ಹಾಗೂ ನಿವೃತ್ತ ಪ್ರಾಂಶುಪಾಲ ಕೆ.ಆರ್. ಲಕ್ಕೇಗೌಡ ಅವರನ್ನು ಸನ್ಮಾನಿಸಲಾಯಿತು.
ಲೇಖಕ ಸುಧಾಕರ ಹೊಸಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು. ನೆಲದನಿ ಸಾಂಸ್ಕೃತಿಕ ಸಂಸ್ಥೆಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement