ಸರ್ಕಾರದ ಬಾಕಿ ಹಣ: ಅಭ್ಯರ್ಥಿಗಳ ಪ್ರಮಾಣ ಸಲ್ಲಿಕೆ
ಮೈಸೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಸರ್ಕಾರಕ್ಕೆ ಕೊಡಬೇಕಾದ ಬಾಕಿ ಹಣದ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಸಂಪತ್ತು ಮಾತ್ರ ಬಾಕಿದಾರ. ಉಳಿದವರು ಯಾವುದೇ ಬಾಕಿ ಉಳಿಸಿಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದ್ದಾರೆ. ಎಚ್.ವಿಶ್ವನಾಥ್ (ಕಾಂಗ್ರೆಸ್), ಚಂದ್ರಶೇಖರಯ್ಯ (ಜೆಡಿಎಸ್), ಪ್ರತಾಪ್ ಸಿಂಹ (ಬಿಜೆಪಿ), ಸಿ.ಮೋಹನ್ಕುಮಾರ್ (ಬಿಎಸ್ಪಿ), ತಿಮ್ಮೇಗೌಡ (ಸರ್ವ ಜನತಾ ಪಾರ್ಟಿ), ಡಿ.ಎಸ್. ನಿರ್ವಾಣಪ್ಪ (ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ.ಎಲ್) ರೆಡ್ಸ್ಟಾರ್), ಎಂ.ವಿ. ಪದ್ಮಮ್ಮ (ಆಮ್ ಆದ್ಮಿ ಪಕ್ಷ), ಎಸ್.ಪಿ. ಮಹದೇವಪ್ಪ (ಜೆಡಿಯು), ರತಿ ಪೂವಯ್ಯ (ಕರುನಾಡು ಪಾರ್ಟಿ), ಹುಣಸೂರು ಕೆ. ಚಂದ್ರಶೇಖರ್ (ಡೆಮಾಕ್ರೆಟಿಕ್ ಪ್ರಜಾಕ್ರಾಂತಿ ಪಾರ್ಟಿ ಸೆಕ್ಯೂಲರಿಸ್ಟ್) ಡಿ.ಈಶ್ವರ್, ಬನ್ನೂರು ಕುಮಾರ್, ಎಂ.ಎಸ್. ಪ್ರವೀಣ್ , ಭೋಜಣ್ಣ ಎನ್. ಸೋಮಯ್ಯ (ಎಲ್ಲರೂ ಪಕ್ಷೇತರ) ಒಟ್ಟು ಈ 14 ಅಭ್ಯರ್ಥಿಗಳು ಸರ್ಕಾರಿ ವಸತಿ, ಜಲಮಂಡಳಿ, ವಿದ್ಯುತ್ಚ್ಚಕ್ತಿ ಮಂಡಳಿ, ಸರ್ಕಾರಿ ಸಾರಿಗೆ (ವಿಮಾನ ಮತ್ತು ಹೆಲಿಕಾಪ್ಟರ್ ಸೇರಿದಂತೆ) ಹಾಗೂ ಸರ್ಕಾರಕ್ಕೆ ಯಾವುದೇ ಬಾಕಿ ಹಣ ಇರುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಎನ್.ಸಂಪತ್ತು (ಪಕ್ಷೇತರ) ಇವರು ಜಲಮಂಡಳಿಗೆ 6 ಸಾವಿರ, ವಿದ್ಯುಚ್ಫಕ್ತಿ ಮಂಡಳಿಗೆ 6 ಸಾವಿರ, ದೂರವಾಣಿ ಇಲಾಖೆಗೆ 2,500, ಆದಾಯ ತೆರಿಗೆ 5 ಸಾವಿರ ಹಾಗೂ ಆಸ್ತಿ ತೆರಿಗೆ 12 ಸಾವಿರ ಸರ್ಕಾರಕ್ಕೆ ಬಾಕಿ ಹಣ ನೀಡಬೇಕಿದೆ ಎಂದು ಸಲ್ಲಿಸಿದ್ದಾರೆ.
ಕಾಂಗ್ರೆಸ್ ಬೆಂಬಲಿಸಿ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 20ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ. ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬರಲಿದೆ. ಹೀಗಾಗಿ ಮತದಾರರು ಭ್ರಷ್ಟ ಬಿಜೆಪಿಯನ್ನು ತೊಲಗಿಸಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಡಿಸಿಸಿ ಸದಸ್ಯ ಎಚ್.ಸಿ. ಕೃಷ್ಣಕುಮಾರ್ ಸಾಗರ್ ಕೋರಿದ್ದಾರೆ.
ಜೆಡಿಎಸ್ ಗೆಲ್ಲಿಸಿ
ಮೈಸೂರು: ಹಿಂದುಳಿದ ವರ್ಗಗಳಲ್ಲಿ ಪ್ರತ್ಯೇಕ ಮೀಸಲಾತಿ ಪರವಾಗಿರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಪ್ರಗತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಕಲ್ಲಂಬಾಳು ಸುಂದರ್ ಮನವಿ ಮಾಡಿದ್ದಾರೆ.