ಸಾಲದ ಬಡ್ಡಿ ಕೊಡದ್ದಕ್ಕೆ ಮನೆಗೆ ಬೆಂಕಿ ಇಟ್ಟರು!
ಮೈಸೂರು: ಹಣ ಪಡೆದು ಸರಿಯಾಗಿ ಬಡ್ಡಿ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ದುಷ್ಕರ್ಮಿಗಳು ಮನೆಯೊಂದಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ಇದರಲ್ಲಿ ಒಂದೇ ಕುಟುಂಬದ 7 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.
ಉದಯಗಿರಿಯ ಕೆ.ಎನ್. ಪುರದ ನಿವಾಸಿ ಅಫ್ಸಲ್ ಪಾಷ (30), ಇವರ ಪತ್ನಿ ಸರೀನ್ ತಾಜ್ (28), ಮಕ್ಕಳಾದ ಮಹೆಫುಸ್ (9), ಯೂನಸ್ (6), ಯೂಸಫ್ (5), ಸೈಫ್ (4) ಮತ್ತು ಶೋಯೆಬ್ (3) ಎಂಬವರು ಗಾಯಗೊಂಡಿದ್ದು, ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಟ್ಟಡ ಕೆಲಸ ಮಾಡಿಕೊಂಡಿದ್ದ ಅಫ್ಸಲ್ ಪಾಷ ಪಕ್ಕದ ಮನೆಯವರ ಬಳಿ ಸಾಲ ಪಡೆದಿದ್ದು, ಸರಿಯಾಗಿ ಬಡ್ಡಿ ಕಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಕದ ಮನೆಯ ನಿವಾಸಿಗಳು ಅಫ್ಸಲ್ ಮನೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಾರ್ವಜನಿಕರ ಸಹಾಯದಿಂದ ಮನೆಯಲ್ಲಿದ್ದ ದಂಪತಿ ಮತ್ತು ಅವರ 5 ಜನ ಗಂಡು ಮಕ್ಕಳನ್ನು ರಕ್ಷಿಸಿ, ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉದಯಗಿರಿ ಠಾಣೆಯ ಪೊಲೀಸರು, ಆರೋಪಿಗಳಾದ ಹಸೀನಾ, ಜಬೀನಾ, ಆದಿಲ್, ಕೌಸರ್ ಮತ್ತು ಸೈದಾ ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎ.ಎನ್. ರಾಜಣ್ಣ, ದೇವರಾಜ ಉಪ ವಿಭಾಗದ ಎಸಿಪಿ ಬಳಕ್ಕನವರ್, ಉದಯಗಿರಿ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ಆರ್.ಪಿ. ಅಶೋಕ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.