ದಲಿತರು ಸಿಎಂ ಆಗಲು ಇದೆ ಅವಕಾಶ
ಮೈಸೂರು: ದಲಿತರಿಗೇನಾದರೂ ಮುಖ್ಯಮಂತ್ರಿ ಸ್ಥಾನ ದಕ್ಕುವುದಾದರೆ ಅದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂಬುದನ್ನು ದಲಿತರು ಅರ್ಥ ಮಾಡಿಕೊಂಡು ಈ ಬಾರಿ ಕಾಂಗ್ರೆಸ್ ಬೆಂಬಲಿಸುವಂತೆ ಕರ್ನಾಟಕ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರು 60 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. ಈಗಲೂ ಬೆಂಬಲಿಸಬೇಕು. ಈ ಪಕ್ಷದಲ್ಲಿ ಒಂದಲ್ಲ ಒಂದು ದಿನ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೆ. ನಮ್ಮ ಜನಾಂಗದ ಕೆಲವರು ಇಲ್ಲಸಲ್ಲದ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ದಲಿತರು ಈ ಭಾಗದ ಅಭ್ಯರ್ಥಿಗಳಾದ ಆರ್. ಧ್ರುವನಾರಾಯಣ, ಎಚ್. ವಿಶ್ವನಾಥ್ ಅವರಿಗೆ ಮತ ನೀಡುವಂತೆ ಕೋರಿದರು.
ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಚಂದ್ರಶೇಖರಯ್ಯ ನ್ಯಾಯಮೂರ್ತಿಗಳಾಗಿದ್ದವರು. ಅವರು ರಾಜಕೀಯಕ್ಕೆ ಬರಬಾರದಿತ್ತು. ಒಂದು ವೇಳೆ ಸೋತರೆ ಅವರ ಸ್ಥಾನ ಕುಗ್ಗುತ್ತದೆ. ಜೆಡಿಎಸ್‌ನವರು ಅವರನ್ನು ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ. ಚಂದ್ರಶೇಖರಯ್ಯ ಇಷ್ಟು ದಿನ ಬೇರೆಯವರಿಗೆ ಶಿಕ್ಷೆ ನೀಡುತ್ತಿದ್ದರು, ಈಗ ಜೆಡಿಎಸ್ ಅವರಿಗೆ ಶಿಕ್ಷೆ ನೀಡುತ್ತಿದೆ ಎಂದ ಅವರು, ಇನ್ನು ಬಿಜೆಪಿಯಿಂದ ಸ್ಪರ್ಧಿಸಿರುವ ಪ್ರತಾಪ್ ಸಿಂಹ ಆರ್‌ಎಸ್‌ಎಸ್ ಪ್ರತಿನಿಧಿ ಎಂದರು.
ಒಂದು ಬಾರಿ ಚುನಾವಣೆ ಬಂದರೆ ಜೆಡಿಎಸ್ ವ್ಯಾಪಾರದಂಗಡಿ ಆಗುತ್ತದೆ. ಟಿಕೆಟ್ ಮಾರಾಟ ಮಾಡಿ ಐದು ವರ್ಷಗಳ ಕಾಲ ಪಕ್ಷಕ್ಕಾಗುವ ಸಂಪನ್ಮೂಲವನ್ನು ಕ್ರೋಡೀಕರಿಸಿಕೊಳ್ಳುತ್ತದೆ. ಉತ್ತಮ ನಾಯಕರು ರಾಜಕೀಯಕ್ಕೆ ಬಂದರೂ ಸಹ ಕೊನೆಗೆ ಜೆಡಿಎಸ್‌ಗೆ ಸೇರಿ ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಡಾ.ಸುಭಾಷ್ ಭರಣಿ ನಿದರ್ಶನ ಕಣ್ಣು ಮುಂದೆ ಇರುವಾಗಲೆ, ಕೆ.ಶಿವರಾಂ ಬಿಜಾಪುರದಿಂದ ಸ್ಪರ್ಧಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾರೆ. ಅವರೊಂದಿಗೆ ಜನರಿಲ್ಲದೆ ಮತದಾನಕ್ಕೂ ಮುನ್ನವೇ ಬೆಂಗಳೂರಿಗೆ ಬರುವ ಸಂಭವವಿದೆ ಎಂದು ವ್ಯಂಗ್ಯವಾಡಿದರು.
ಮಹಾಸಭಾದ ಪದಾಧಿಕಾರಿಗಳಾದ ಈಶ್ವರ ಚಕ್ಕಡಿ, ವೆಂಕಟರಾಮ್, ಡಾ.ನವೀನ್‌ಕುಮಾರ್ ಇದ್ದರು.
ಕಾಂಗ್ರೆಸ್ ಉಸ್ತುವಾರಿಗಳ ನೇಮಕ
ಮೈಸೂರು: ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮಸೂದ್ ಫೌಜ್‌ದಾರ್ ಈ ಕೆಳಕಂಡವರನ್ನು 2014ರ ಲೋಕಸಭಾ ಚುನಾವಣೆಯ ಮೈಸೂರು, ಕೊಡಗು ಮತ್ತು ಚಾಮರಾಜನಗರ ಜಿಲ್ಲಾ ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ. ಎಸ್.ರೆಹಾನಾ ಬಾನು (ರಾಜ್ಯ ಸಂಘಟನಾ ಕಾರ್ಯದರ್ಶಿ), ಇಮ್ತಿಯಾಜ್ ಅಹಮದ್ ಸೇಠ್ (ಅಧ್ಯಕ್ಷರು, ಎನ್‌ಜಿಒ ಫೆಡರೇಷನ್), ಡಾ.ಶಬೀರ್ ಆಲಿಖಾನ್ (ಶೋಷಿಯಲ್ ಅನಾಲಿಸ್ಟ್), ಸೈಯದ್ ಯಾಕೂಬ್, ಸರ್ದಾರ್ ಅಹಮದ್, ಮೊಹಮ್ಮದ್ ಅಮೀನ್ (ಸಮಾಜ ಸೇವಕರು). ಮೇಲ್ಕಂಡ ವೀಕ್ಷಕರ ತಂಡವು ಈ ಜಿಲ್ಲೆಯಲ್ಲಿ ಚುನಾವಣಾ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ, ಚುನಾವಣಾ ಅಭ್ಯರ್ಥಿಗಳಿಗೆ ನೈತಿಕ ಸಹಕಾರ ನೀಡಿ, ವರದಿ ನೀಡುವಂತೆ ಮಸೂದ್ ಕೋರಿದ್ದಾರೆ.
ಖರ್ಗೆಗೆ ಸಿಎಂ ಪಟ್ಟ ತಪ್ಪಿಸಿದ್ದು ದೇವೇಗೌಡರು
2004 ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ದೇವೇಗೌಡರು ತಮಗೆ ಬೇಕಾದ ಧರಂಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ನೋಡಿಕೊಂಡು, ಎಂ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಿಸಿದರು. 2008ರಲ್ಲಿ ವಚನಭ್ರಷ್ಟತೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ದೊಂಬರಾಟ ಪ್ರದರ್ಶಿಸಿತು. 2013ರ ಚುನಾವಣೆಯಲ್ಲಿ ಜಿ.ಪರಮೇಶ್ವರ್ ಸೋತಿದ್ದಕ್ಕೆ ಸಹಜವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಈಗಲೂ ಕಾಲ ಮಿಂಚಿಲ್ಲ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದಲಿತರನ್ನು ಮುಖ್ಯಮಂತ್ರಿ ಮಾಡುತ್ತದೆ ಎಂದರು.