ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ!
ಮೈಸೂರು: ಕೊಟ್ಟ ಸಾಲ ವಾಪಸ್ ಕೇಳಿದ ಸಂಬಂಧಿಕ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಯನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಎಂ.ರಾಜು ಎಂಬವರ ಪುತ್ರ ಹಾಗೂ ಜೆಎಸ್‌ಎಸ್ ಫಾರ್ಮಸಿಯ ಎಸ್‌ಡಿಎ ಕೆ.ಆರ್. ರಾಜಶೇಖರ್ (42) ಬಂಧಿತ ಆರೋಪಿ. ಈತ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಪಟ್ಟಣದ ನಿವಾಸಿ ಮಹದೇವ ಚಂದ್ರರಾಜ್ ಅ. ಚೇತನ್ ಎಂಬವರನ್ನು ಕೊಲೆ ಮಾಡಿದ್ದ.
ರಾಜಶೇಖರ್‌ಗೆ ಸಂಬಂಧಿಯಾದ ಚೇತನ್ ಬಳಿ 5 ಲಕ್ಷ ಸಾಲ ಪಡೆದಿದ್ದ. ಈ ಸಾಲದ ಹಣ ವಾಪಸ್ ನೀಡದ ಹಿನ್ನೆಲೆಯಲ್ಲಿ ಚೇತನ್ ಅವಾಚ್ಯವಾಗಿ ರಾಜಶೇಖರ್‌ನನ್ನು ನಿಂದಿಸುತ್ತಿದ್ದ. ಇದರಿಂದ ಕುಪಿತಗೊಂಡ ರಾಜಶೇಖರ್, ಹಣ ವಾಪಸ್ ಕೊಡುವುದಾಗಿ ಫೆ.20 ರಂದು ಚೇತನ್‌ನನ್ನು ಮನೆಗೆ ಕರೆಸಿಕೊಂಡು, ಜ್ಯೂಸ್‌ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು, ನಂತರ ಕೊಲೆ ಮಾಡಿದ್ದಾನೆ. ನಂತರ ಚೇತನ್ ಬಂದಿದ್ದ ಕಾರಿನಲ್ಲೇ ಆತನ ಶವವನ್ನು ನಂಜನಗೂಡು ಬಳಿಯ ಕುರಹಟ್ಟಿ ರಸ್ತೆಯಲ್ಲಿ ಪೆಟ್ರೋಲ್ ಹಾಕಿ ಸುಟ್ಟಿದ್ದಾನೆ. ನಂತರ ಕಾರನ್ನು ಮದ್ದೂರು ಬಳಿ ಬಿಟ್ಟು ಬಂದಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ 1.35 ಲಕ್ಷ ಹಾಗೂ 50 ಗ್ರಾಂ. ಚಿನ್ನದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಅಭಿನವ್ ಅಶೋಕ್ ಖರೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಭಾರ ಹೆಚ್ಚುವರಿ ಎಸ್ಪಿ ನಂಜುಂಡ, ನಂಜನಗೂಡು ಉಪ ವಿಭಾಗದ ಸಹಾಯಕ ಎಸ್ಪಿ ಡಾ.ರಾಜ ಮಾರ್ಗದರ್ಶನದಲ್ಲಿ ನಂಜನಗೂಡು ಸಿಪಿಐ ಜಿ.ಎಸ್. ರಘು, ಪಿರಿಯಾಪಟ್ಟಣ ಸಿಪಿಐ ಪ್ರಸನ್ನಕುಮಾರ್, ಡಿಸಿಐಬಿ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ, ನಂಜನಗೂಡು ಗ್ರಾಮಾಂತರ ಠಾಣೆ ಎಸ್‌ಐ ನಟರಾಜು ಆರೋಪಿಯನ್ನು ಬಂಧಿಸಿದ್ದಾರೆ.