ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ
ಮೈಸೂರು: ಮತದಾರರು ಆಸೆ, ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಕರ್ನಾಟಕ ದಲಿತ ವಿಮೋಚನಾ ಪರಿಷತ್ ಅಧ್ಯಕ್ಷ ಆಲೂರು ಮಲ್ಲಣ್ಣ, ಕಾರ್ಯಾಧ್ಯಕ್ಷ ಪ್ರೊ.ಕೆ.ಸಿ. ಶಿವಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಶೇಖರ್ ಮನವಿ ಮಾಡಿದ್ದಾರೆ. ಪ್ರತಿಯೊಬ್ಬ ಮತದಾರನೂ ಯಾವುದೆ ಆಸೆ, ಆಮಿಷಕ್ಕೆ ಒಳಗಾಗದೆ ಸ್ವ ಇಚ್ಛೆಯಿಂದ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಭಾರತ ಸಂವಿಧಾನದ ಆಶಯವನ್ನು ಉಳಿಸಿ, ಪ್ರಜಾಪ್ರಭುತ್ವ ಬೆಳೆಸಬೇಕು. ಯಾವುದೆ ಧರ್ಮ ಜಾತಿಗಳ ಹೆಸರಿನಲ್ಲಿ ಮತಯಾಚಿಸುವವರನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣೆ ಜಾಗೃತಿಗಾಗಿ ಚಿತ್ರಕಲಾ ಸ್ಪರ್ಧೆ
ಮೈಸೂರು: ವಿವೇಕಾನಂದ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಡೆವಲಪ್ಮೆಂಟ್ ಸಂಸ್ಥೆ ಮತ್ತು ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ ಒಟ್ಟಾಗಿ ಏ.6 ರಂದು ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನ ಹಮ್ಮಿಕೊಂಡಿದೆ. ಆಕಾಶವಾಣಿ ಸಮೀಪದ ಚಲುವಾಂಬ ಉದ್ಯಾನದಲ್ಲಿ ಚುನಾವಣೆ ಮತ್ತು ನಾವು ಎಂಬ ವಿಷಯ ಕುರಿತು ಏ.6ರ ಸಂಜೆ 3ಕ್ಕೆ ಮುಕ್ತ ಚಿತ್ರಕಲೆ ಸ್ಪರ್ಧೆಯನ್ನು ಉಚಿತ ಪ್ರವೇಶಾವಕಾಶದೊಂದಿಗೆ ಆಯೋಜಿಸಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಏ.5 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಚಿತ್ರಕಲೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಅಭ್ಯರ್ಥಿಗಳೆ ತರಬೇಕು. ಹೆಚ್ಚಿನ ಮಾಹಿತಿಗೆ ಮೊ. 9008381581 ಅಥವಾ 9741099670 ಸಂಪರ್ಕಿಸಬಹುದು.