ಚಟ್ನಹಳ್ಳಿಪಾಳ್ಯದ ವ್ಯಕ್ತಿ ಆತ್ಮಹತ್ಯೆ
ಮೈಸೂರು: ತನ್ನ ವಿರುದ್ಧ ಪೊಲೀಸರಿಗೆ ಪತ್ನಿ ದೂರು ನೀಡಲು ಹೋಗುತ್ತಿದ್ದರಿಂದ ಮನನೊಂದ ವ್ಯಕ್ತಿಯೊಬ್ಬ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ನಡೆದಿದೆ. ಮೈಸೂರು ತಾಲೂಕು ಚಟ್ನಹಳ್ಳಿಪಾಳ್ಯದ ನಿವಾಸಿ ರವೀಂದ್ರ (35) ಆತ್ಮಹತ್ಯೆ ಮಾಡಿಕೊಂಡವರು. ಗಂಡ- ಹೆಂಡತಿ ಆಗಾಗ ಜಗಳ ಮಾಡಿಕೊಂಡಿದ್ದು, ಪತ್ನಿ ಪೂರ್ಣಿಮಾ ಈ ಹಿಂದೆಯೇ 2 ಬಾರಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರೇ ರಾಜಿ ಮಾಡಿಸಿದ್ದರು. ಆದರೆ, ಈ ದಂಪತಿ ಮತ್ತೆ ಜಗಳ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿದು ಪೂರ್ಣಿಮಾ ತಂದೆ ಚಟ್ನಹಳ್ಳಿಪಾಳ್ಯಕ್ಕೆ ಆಗಮಿಸಿದ್ದಾರೆ. ಮಗಳನ್ನು ಕರೆದೊಂಡು ದುದ್ದಗೆರೆ ಗೇಟ್ ಬಳಿಗೆ ಬರುವಷ್ಟರಲ್ಲಿ ಮನೆಯಲ್ಲಿದ್ದ ರವೀಂದ್ರ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿದ್ದ ರವೀಂದ್ರನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ಮಧ್ಯಾಹ್ನ ಮೃತಪಟ್ಟಿದ್ದಾರೆ. ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.