ಪ್ರೊ.ಬಸವರಾಜು ನೇಮಕ ರದ್ದು: ವಿಷಾದ
ಮೈಸೂರು: ಮೈಸೂರು ವಿವಿ ಕುಲಸಚಿವರಾಗಿದ್ದ ಪ್ರೊ.ಸಿ. ಬಸವರಾಜು ಅವರ ನೇಮಕಾತಿಯನ್ನು ಸರ್ಕಾರ ವಾಪಸ್ ಪಡೆದಿರುವುದು ವಿಷಾದಕರ ಎಂದು ಯುವ ಪ್ರಗತಿಪರ ಚಿಂತಕರ ಸಂಘ ತಿಳಿಸಿದೆ.
ಈ ಆದೇಶದ ಹಿನ್ನೆಲೆಯಲ್ಲಿ ಕಳೆದ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯ ಪ್ರಾಸ್ತಾಪಿಸಬೇಕೆಂದು ಕುಲಪತಿಯವರನ್ನು ಕೋರಿಕೊಂಡಾಗ, ಅದನ್ನು ಪ್ರಸ್ತಾಪಿಸುವ ಅವಶ್ಯಕತೆ ಇಲ್ಲ. ಈ ಪ್ರೊಬೆಷನರಿ ವಿಷಯವಾಗಿಯೇ ವಿಶೇಷ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. ಅಷ್ಟರಲ್ಲಿಯೇ ಸರ್ಕಾರದ ಮಟ್ಟದಲ್ಲಿ ಈ ವಿಷಯ ಪ್ರಸ್ತಾಪಿಸಿ ನೇಮಕಾತಿ ರದ್ದುಪಡಿಸಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಅವರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸಂಘದ ಪದಾಧಿಕಾರಿಗಳಾದ ಚಂದ್ರಗುಪ್ತ, ರಂಗಸ್ವಾಮಿ ಕಾಳಿಹುಂಡಿ, ಬಿ.ಮೂರ್ತಿ, ಬಿ.ಶಿವಶಂಕರ್ ದೂರಿದ್ದಾರೆ.
2007ರ ನೇಮಕಾತಿಯಲ್ಲಿ ಪ್ರೊ.ಸಿ.ಬಸವರಾಜು ಅವರ ಹುದ್ದೆಯ ಬಗ್ಗೆ ರಂಗವಿಠಲಾಚಾರ್ಯರ ವರದಿಯಲ್ಲಿ ಯಾವುದೇ ಆರೋಪವಿಲ್ಲ. ಹೀಗಿದ್ದರೂ ಇವರ ನೇಮಕಾತಿಯು ಕಾನೂನು ಬಾಹಿರ ಎಂದು ಹೇಳುತ್ತಿರುವುದು ಅಸಮಂಜಸವಾಗಿದೆ. ಅಲ್ಲದೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸರ್ಕಾರ ಈ ಆದೇಶ ಹೊರಡಿಸಿರುವುದು ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ. ಆದ್ದರಿಂದ ಸಚಿವ ವಿ. ಶ್ರೀನಿವಾಸಪ್ರಸಾದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ರದ್ದತಿ ಆದೇಶವನ್ನು ಹಿಂಪಡೆಯಬೇಕು. ತಪ್ಪಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.