ಮಂಗಳಮುಖಿಯರಿಗೆ ಮತದಾನ ಜಾಗೃತಿ
ಮೈಸೂರು: ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮಂಗಳಮುಖಿಯರಿಗೂ ಮತದಾನದ ಹಕ್ಕು ಚಲಾಯಿಸಲು ಚುನಾವಣೆ ಆಯೋಗ ಅವಕಾಶ ಕಲ್ಪಿಸಿರುವುದರಿಂದ ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ವತಿಯಿಂದ ಅವರಿಗೆ ಜಾಗೃತಿ ಮೂಡಿಸಲಾಯಿತು. ನಗರದ ಆಶೋದಯ ಸಮಿತಿ ಸಭಾಂಗಣದಲ್ಲಿ ಸ್ವೀಪ್ನಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು. ಜಿಪಂ ಸಿಇಒ ಪಿ.ಎ.ಗೋಪಾಲ್ ಮಾತನಾಡಿ, ಮತದಾನದಲ್ಲಿ ಸರ್ವರ ಪಾಲ್ಗೊಳ್ಳುವಿಕೆ ಅಗತ್ಯ. ಪ್ರಜಾಪ್ರಭುತ್ವದಲ್ಲಿ ಮತದಾನ ಪವಿತ್ರವಾಗಿರುವ ಹಕ್ಕು ಭಾರತೀಯರಾದ ನಾವು ನಮ್ಮ ಸಂವಿಧಾನ ನಮಗೆ ನೀಡಿರುವ ಈ ಪವಿತ್ರ ಹಕ್ಕನ್ನು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವುದರ ಮೂಲಕ ಚಲಾಯಿಸಬೇಕು ಎಂದರು. ಲಿಂಗತ್ವ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಡ್ಡಾಯ ಮತದಾನದ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎನ್.ಆರ್. ವಿಜಯ್, ಲಿಂಗರಾಜಯ್ಯ ಲೋಕ ಶಿಕ್ಷಣ ಸಮಿತಿಯ ಉಪನಿರ್ದೇಶಕ ರಾಜಶೇಖರ್ ಜವಳಗಿ, ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್, ಎಂ.ಪ್ರವೀಣ್, ಆಶೋದಯ ಸಮಿತಿಯ ಪ್ರಣತಿ ಪ್ರಕಾಶ್, ರತ್ನಮ್ಮ, ದೀಪಿಕಾ ಭಾಗವಹಿಸಿದ್ದರು.
ಭಾರತ ನಿರ್ಮಾಣ ರಥಯಾತ್ರೆಗೆ ಚಾಲನೆ
ಮೈಸೂರು: ಭಾರತ ನಿರ್ಮಾಣ ರಥಯಾತ್ರೆಗೆ ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಗುರುವಾರ ಸಂಜೆ ಚಾಲನೆ ನೀಡಿದರು. ನಗರದ ಜಯಲಕ್ಷ್ಮಿಪುರಂನಲ್ಲಿರುವ ಶಾಸಕ ವಾಸು ಅವರ ನಿವಾಸದ ಬಳಿ ಈ ರಥಯಾತ್ರೆಗೆ ಚಾಲನೆ ದೊರೆಯಿತು. ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಅವರ ಪರವಾಗಿ ಪ್ರಚಾರ ಮಾಡಲು ಈ ರಥವು ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಲಿದೆ. ಶಾಸಕ ವಾಸು, ಪಾಲಿಕೆ ಸದಸ್ಯ ಸುಹೇಲ್ ಬೇಗ್, ಮುಖಂಡರಾದ ಮೂರ್ತಿ, ಅಮಿತ್, ಪ್ರದೀಪ್, ಜಗನ್ನಾಥ್, ಈಶ್ವರ ಚಕ್ಕಡಿ, ಶೌಕತ್ ಅಲಿ ಖಾನ್ ಇದ್ದರು. ನಂತರ ನಡೆದ ಮಹಿಳಾ ಕಾಂಗ್ರೆಸ್ ಸಭೆ ನಡೆಯಿತು. ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್, ಶಾಸಕ ವಾಸು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೀನಾ ತೂಗುದೀಪ ಶ್ರೀನಿವಾಸ್ ಭಾಗವಹಿಸಿದ್ದರು. ಶಾಸಕ ವಾಸು ಅವರು ಹೆಬ್ಬಾಳು ಪ್ರದೇಶದಲ್ಲಿ ಮತಯಾಚಿಸಿದರು. ಸಂಜೆ ಗಂಗೋತ್ರಿ ಬಡಾವಣೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಶ್ರೀನಿವಾಸಪ್ರಸಾದ್ ಅವರು ಸಹ ಪಾಲ್ಗೊಂಡಿದ್ದರು. ಶಾಸಕರಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್ ಅವರು ನರಸಿಂಹರಾಜ ಮತ್ತು ಕೃಷ್ಣರಾಜ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದರು.
ಜೆಡಿಎಸ್ ಬಹಿರಂಗ ಸಭೆ ಇಂದು
ಹುಣಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕು ಜೆಡಿಎಸ್ ಘಟಕವು ಏ.4ರಂದು ಪಟ್ಟಣದ ಪುರಸಭಾ ಮೈದಾನದಲ್ಲಿ ಪ್ರಚಾರ ಸಭೆ ಆಯೋಜಿಸಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಸಭೆಯನ್ನುದ್ದೇಶಿಸಿ ಮಾತನಾಡುವರು.
ವಿಜೇತರಿಗೆ ಸನ್ಮಾನ
ಶ್ರೀ ಹೊಸಮಠದ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏ.5ರ ಬೆಳಗ್ಗೆ 11ಕ್ಕೆ ಶ್ರೀ ನಟರಾಜ ಸಭಾಭವನದಲ್ಲಿ ಸ್ವರ್ಣ ಪದಕ ವಿಜೇತರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಎಂ.ಶಿವಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು.