ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಪರಾಧಗಳಲ್ಲಿ ವೈದ್ಯ ದಾಖಲೆಗಳೇ ಜೀವಾಳ

Rashmi Kasaragodu
Updated On : 5 Apr 2014, 2:09 am

ಕ.ಪ್ರ.ವಾರ್ತೆ    ಮೈಸೂರು    ಏ. 4
ಪೊಲೀಸ್ ಠಾಣೆ ಮೆಟ್ಟಿಲೇರುವ ಅಪರಾಧ ಪ್ರಕರಣಗಳಲ್ಲಿ ಸತ್ಯವಂತರಿಗೆ ನ್ಯಾಯ ದೊರಕಿಸಿಕೊಡಬೇಕಾದಲ್ಲಿ ವೈದ್ಯಕೀಯ ದಾಖಲೆಗಳೇ ಜೀವಾಳವಾಗಿರುತ್ತವೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು.
ಅಪೋಲೋ ಬಿಜಿಎಸ್ ಆಸ್ಪತ್ರೆಯು ಶುಕ್ರವಾರ ನಗರದ ಜೆ.ಕೆ. ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಏರ್ಪಡಿಸಿದ್ದ ಮೆಡ್ರೇಕಾನ್- 2014 14ನೇ ವಾರ್ಷಿಕ ರಾಷ್ಟ್ರೀಯ ದಾಖಲೆಗಳ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕ್ರಿಮಿನಲ್ ಪ್ರಕರಣ, ರಸ್ತೆ ಅಪಘಾತಗಳು ಸಂಭವಿಸಿದ್ದಲ್ಲಿ ಮೊದಲ ವರದಿ ಸಿದ್ಧವಾಗುವುದು ಆಸ್ಪತ್ರೆಯಲ್ಲಿಯೇ. ವೈದ್ಯರು ಕೊಡುವ ದಾಖಲೆ ಆಧರಿಸಿ ನಾವು ಪ್ರಕರಣ ದಾಖಲು ಮಾಡುತ್ತೇವೆ. ಅಲ್ಲಿನ ಸತ್ಯ ವರದಿಯ ಪ್ರಕರಣದ ತಿರುವನ್ನು ನಿರ್ಧರಿಸುತ್ತವೆ ಎಂದರು.
ನಿರಪರಾಧಿಗಳಿಗೆ ಶಿಕ್ಷೆಯಾಗದಂತೆ, ಅಪರಾಧಗಳಿಗೆ ಶಿಕ್ಷೆಯಾಗುವಂತೆ ಅತ್ಯಂತ ಎಚ್ಚರಿಕೆಯಿಂದ ಆಸ್ಪತ್ರೆಯವರು ವೈದ್ಯಕೀಯ ವರದಿ ಸಿದ್ಧಪಡಿಸಬೇಕಾಗುತ್ತದೆ. ನೈಜ ಘಟನೆ ಆಧರಿಸಿ, ಹಲ್ಲೆಗಳೊಳಗಾದವರ ದೇಹ ಲಕ್ಷಣವನ್ನು ತಪಾಸಣೆ ಮಾಡಿ ನಮಗೆ ಸರಿಯಾದ ವರದಿ ಅಥವಾ ಮಾಹಿತಿ ನೀಡಿದರೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ಎಷ್ಟೋ ಪ್ರಕರಣಗಳಲ್ಲಿ ವೈದ್ಯಕೀಯ ವರದಿಗಳಿಲ್ಲದೆ ದೋಷಾರೋಪಣಾ ಪಟ್ಟಿ ಸಲ್ಲಿಸುವಾಗ ಪೊಲೀಸರು ಹೆಣಗಾಡುತ್ತಾರೆ. ಆದ್ದರಿಂದ ಆಸ್ಪತ್ರೆಯ ಆಡಳಿತ ಮಂಡಳಿಯವರು ವೈದ್ಯಕೀಯ ದಾಖಲೆಗಳನ್ನು ಸಂರಕ್ಷಿಸಿಟ್ಟಲ್ಲಿ ನಮಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ದಾಖಲೆ ಸಹಾಯಕ: ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ.ಕೆ. ಕೃಷ್ಣಮೂರ್ತಿ ಮಾತನಾಡಿ, ವೈದ್ಯಕೀಯ ದಾಖಲೆಗಳನ್ನು ಹೊರತುಪಡಿಸಿ ಯಾವುದೇ ಕಾರ್ಯಗಳನ್ನು ಮಾಡುವಂತಿಲ್ಲ. ಒಂದು ಬಾರಿ ರೋಗಿ ಆಸ್ಪತ್ರೆಗೆ ಬಂದಲ್ಲಿ ಅಲ್ಲಿಂದಲೇ ಆತನ ರೋಗದ ಸ್ಥಿತಿ, ಗುಣಮುಖದ ಹಾದಿ, ಚಿಕಿತ್ಸೆ, ಔಷಧ ಪಟ್ಟಿಯನ್ನು ಸರಿಯಾದ ಕ್ರಮದಲ್ಲಿ ದಾಖಲೀಕರಿಸಬೇಕು. ಈ ದಾಖಲೆ ರೋಗಿಯ ಜೀವನ- ಮರಣದ ದ್ಯೋತಕವಾಗಿರುತ್ತದೆ. ಮುಂದಿನ ಸಲ ಮತ್ತೊಬ್ಬ ವೈದ್ಯರ ಬಳಿ ಹೋದಾಗ ರೋಗಿಯ ಬಗೆಗೆ ತಿಳಿದುಕೊಳ್ಳಲು ಸಹಾಯಕವಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ದಾಖಲೆಗಳನ್ನು ಸಂಗ್ರಹಿಸಿಡಲು ಮುತುವರ್ಜಿ ವಹಿಸಲಾಗುತ್ತಿದೆ. ಕಂಪ್ಯೂಟರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳು ಈ ನಿಟ್ಟಿನಲ್ಲಿ ಕ್ರಮ ವಹಿಸಿರುವುದು ಶ್ಲಾಘನೀಯ. ಕ್ಲಿನಿಕಲ್ ಪ್ರಾಕ್ಟಿಸ್ ಕೂಡ ವೈದ್ಯಕೀಯ ದಾಖಲೆಯಾಗಿ ನಮೂದಾದರೆ ವೈದ್ಯಕೀಯ ವೃತ್ತಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿದಂತಾಗುತ್ತದೆ. ಆದ್ದರಿಂದ ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆದು ಮುಂದಿನ ನಡೆಯನ್ನು ನಿರ್ಧರಿಸುವಂತಾಗಲಿ ಎಂದು ಆಶಿಸಿದರು.
ಅಪೋಲೋ ಬಿಜಿಎಸ್ ಆಸ್ಪತ್ರೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಎನ್.ಜಿ. ಭಾರತೀಶ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಸೇವಾ ವಿಭಾಗದ ನಿರ್ದೇಶಕ ಡಾ.ಎಚ್.ಎಸ್. ಸೋಮನಾಥ್, ಡಾ. ಮೋಗ್ಲಿ ಹೆಲ್ತ್ಕೇರ್ ಮ್ಯಾನೇಜ್ಮೆಂಟ್ ಕಾನ್ಸ್ಲ್ಟೆನ್ಸಿಯ ಸಿಇಒ ಡಾ.ಜಿ.ಡಿ. ಮೋಗ್ಲಿ, ಹೆರಾಯ್ನ ಅಧ್ಯಕ್ಷ ಸಿ. ಗೋವಿಂದರಾಜನ್, ಉಪಾಧ್ಯಕ್ಷ ಡಿ. ಸಣ್ಣವೀರಭದ್ರಪ್ಪ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement