ಕೈ, ಕಮಲದಿಂದಾದ ಅನ್ಯಾಯ ಸರಿಪಡಿಸುವೆ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಏ. 4
ನಾನಿನ್ನು ಜೀವಂತವಾಗಿ ಬದುಕಿದ್ದೇನೆ. ಕಣ್ಣೀರಾಕಲು ಬಂದಿಲ್ಲ. ರೋಷ, ತಾಳ್ಮೆ ನನ್ನಲ್ಲಿದೆ. ನಾನು ಸೋಲನ್ನೂ ಕಂಡಿದ್ದೇನೆ, ಗೆಲುವನ್ನೂ ನೋಡಿದ್ದೇನೆ. ಬಿಜೆಪಿ ಹಾಗೂ ಕಾಂಗ್ರೆಸ್ನಿಂದ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸುವುದೇ ನನ್ನ ಗುರಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿಯವರು ನಾನು ಸತ್ತಿರುವುದಾಗಿ ತಿಳಿದಿದ್ದಾರೆ. ನಾನಿನ್ನೂ ಸತ್ತಿಲ್ಲ. ರೈತರ, ಶೋಷಿತ ಸಮುದಾಯ ಸೇರಿದಂತೆ ಎಲ್ಲ ವರ್ಗದವರಿಗೂ ನ್ಯಾಯ ದೊರಕಿಸಿಕೊಡುವ ನಿಟ್ಚಿನಲ್ಲಿ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 23 ಸೀಟುಗಳನ್ನು ಗೆಲ್ಲುತ್ತೇವೆ, ದೇವೇಗೌಡರನ್ನು ತೆಗೆಯುತ್ತೇವೆ ಎಂದು ಹೊರಟಂತಿದೆ. ಅವರಿಗೇನಾಗಿದೆ, ಹಿಂದೆ ಅವರನ್ನು ಬೆಳೆಸಿದ್ದು ಯಾರು ಎಂಬುದನ್ನು ಮರೆತಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಅಭ್ಯರ್ಥಿ ಚಂದ್ರಶೇಖರಯ್ಯ ಅವರಿಗೆ ಮತ ನೀಡುವ ಮೂಲಕ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಜಾಫರ್ ಷರೀಫ್ ಪತ್ರ: ಮೆಕ್ಕಾ-ಮದೀನಾದಿಂದ ಜಾಫರ್ ಷರೀಫ್ ಅವರು ಬರೆದಿರುವ ಪತ್ರವನ್ನು ವೇದಿಕೆಯಲ್ಲಿ ಓದಿದ ಮಾಜಿ ಪ್ರಧಾನಿ ದೇವೇಗೌಡರು, ಜಾಫರ್ ಷರೀಫ್ ಅವರು ಪಕ್ಷದ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಶುಭ ಹಾರೈಸುವ ಮೂಲಕ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಮಹದೇವ್ ಸೋಲು ಒಂದು ದುರಂತ. ಚುನಾವಣಾ ಕಣದಲ್ಲಿದ್ದ ಅಭ್ಯರ್ಥಿ ಒಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಚುನಾವಣೆಯಲ್ಲಿ ಕೆ.ಮಹದೇವ್ ಸೋಲಬೇಕಾಯಿತು ಎಂದು ಮಹದೇವ್ ಅವರ ಸೋಲಿನ ಬಗ್ಗೆ ಬೇಸರ ಹಾಗೂ ಅನುಕಂಪ ವ್ಯಕ್ತಪಡಿಸಿದರು.
ಶಾಸಕ ಸಾ.ರಾ. ಮಹೇಶ್ ಮಾತನಾಡಿ, ಹಾಲಿ ಸಂಸದರು ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಹಾಗೂ ಕೇಂದ್ರದಿಂದ ಯಾವ ಯೋಜನೆಯನ್ನು ಕ್ಷೇತ್ರಕ್ಕೆ ತಂದಿದ್ದಾರೆ, ಅವರ ಕೊಡುಗೆ ಏನು ಎಂಬುದನ್ನು ಮತ್ತು ಯಾವ ಆಧಾರದ ಮೇಲೆ ಅವರು ಜನರ ಬಳಿ ಮತ ಕೇಳುತ್ತಾರೆ ಎಂಬುದನ್ನು ತಿಳಿಸಲಿ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಚಂದ್ರಶೇಖರಯ್ಯ ಗೆಲುವು ನಿಶ್ಚಿತ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತೊಮ್ಮೆ ಪ್ರಧಾನಿ ಆಗುವುದು ಖಚಿತ ಎಂದು ತಿಳಿಸಿದರು.
ಶಾಸಕ ಕೆ.ವೆಂಕಟೇಶ್ ಅವರಿಗೆ ಮಂತ್ರಿ ಸ್ಥಾನ ಸಿಗುವುದನ್ನು ತಪ್ಪಿಸಿದ್ದು ಸಂಸದ ಎಚ್.ವಿಶ್ವನಾಥ್. ಹೀಗಾಗಿ ಸಂಸದರ ಹಾಗೂ ಶಾಸಕರ ನಡುವೆ ಅಸಮಾಧಾನವಿದ್ದು, ಶಾಸಕ ಕೆ.ವೆಂಕಟೇಶ್ ಚುನಾವಣಾ ಪ್ರಚಾರದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ಪಕ್ಷದ ತಾಲೂಕು ಅಧ್ಯಕ್ಷ ಕೆ. ಮಹದೇವ್ ಮಾತನಾಡಿ, ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಲ್ಲಿರುವ ಒಕ್ಕಲಿಗ ಸಮುದಾಯದವರು ದೂರದೃಷ್ಟಿ ಇಟ್ಟುಕೊಂಡು ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಪಕ್ಷದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಮಾತನಾಡಿ, ತಮ್ಮನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡುವ ಮೂಲಕ ಮಾಜಿ ಪ್ರಧಾನಿ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.
ಶಾಸಕರಾದ ಜಿ.ಟಿ. ದೇವೇಗೌಡ, ಚಿಕ್ಕಮಾದು, ಪಕ್ಷದ ತಾಲೂಕು ಅಧ್ಯಕ್ಷ ಕೆ. ಮಹದೇವ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಈ ಹಿಂದೆ ಕಾಂಗ್ರೆಸ್ನಲ್ಲಿದ್ದು ನಂತರದ ಬೆಳವಣಿಗೆಗಳಲ್ಲಿ ಬಿಎಸ್ಆರ್ ಕಾಂಗ್ರೆಸ್ಗೆ ಸೇರ್ಪಡೆಗೊಂಡ ಎಚ್.ಡಿ. ಗಣೇಶ್ ಅವರೊಂದಿಗೆ ಗುರುತಿಸಿಕೊಂಡಿದ್ದ ರಹಮತ್ಜಾನ್ಬಾಬು ಜೆಡಿಎಸ್ಗ ಸೇರ್ಪಡೆಗೊಂಡರು. ಜಿಪಂ ಸದಸ್ಯರಾದ ಶಿವಣ್ಣ, ಸುಚಿತ್ರಾ, ತಾಪಂ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷ ರಘುನಾಥ್, ಬೆಂಗಳೂರಿನ ಮಾಜಿ ಮೇಯರ್ ಪದ್ಮಮ್ಮ, ಪಕ್ಷದ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಇದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 23 ಸೀಟುಗಳನ್ನು ಗೆಲ್ಲುತ್ತೇವೆ, ದೇವೇಗೌಡರನ್ನು ತೆಗೆಯುತ್ತೇವೆ ಎಂದು ಹೊರಟಂತಿದೆ. ಅವರಿಗೇನಾಗಿದೆ, ಹಿಂದೆ ಅವರನ್ನು ಬೆಳೆಸಿದ್ದು ಯಾರು ಎಂಬುದನ್ನು ಮರೆತಂತಿದೆ.
ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ