ಜೀವನದ ಯಶಸ್ಸಿಗೆ ಅಂಕವೇ ಆಧಾರವಲ್ಲ
ಮೈಸೂರು: ಜೀವನದ ಯಶಸ್ಸಿಗೆ ಕೇವಲ ಅಂಕವೇ ಆಧಾರವಲ್ಲ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ. ಲೋಲಾಕ್ಷಿ ಹೇಳಿದರು.
ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಜಗನ್ಮೋಹನ ಅರಮನೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಲಾ ಕಾರಂಜಿ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೇವಲ ತರಗತಿಯೊಳಗಿನ ಪಠ್ಯ ಚಟುವಟಿಕೆಗಳಾಗಲಿ ಅಥವಾ ಪಡೆಯುವ ಅಂಕವಾಗಲಿ ಮುಖ್ಯವಲ್ಲ. ಅದರಾಚೆಗೂ ಪ್ರಾಯೋಗಿಕವಾಗಿ ನಡೆಸುವ ಚಟುವಟಿಕೆಗಳು ಜೀವನಕ್ಕೆ ಅನುಭವವನ್ನೂ ಹಾಗೂ ಬದುಕಿಗೆ ಮೌಲ್ಯವನ್ನೂ ಕಲಿಸಲಿದೆ. ಸಂಗೀತ, ನಾಟಕ, ನೃತ್ಯ ಮುಂತಾದ ಕಲೆಗಳು ಹಾಗೂ ಎನ್ಎಸ್ಎಸ್ ಕಾರ್ಯಕ್ರಮಗಳು ಮೌಲ್ಯಯುತ ಬದುಕು ಅಳವಡಿಸಿಕೊಳ್ಳಲು ಅನಿವಾರ್ಯ ಎಂದರು.
ಇತ್ತೀಚೆಗೆ ಶಿಕ್ಷಣ ಪದ್ಧತಿ ಸರಿಯಿಲ್ಲ ಎಂಬ ದೂರುಗಳಿವೆ. ಆದರೆ ಅದನ್ನು ಕ್ರಮಬದ್ಧವಾಗಿ ಅನುಸರಿಸುವಲ್ಲಿ ಹಿಂದುಳಿದಿದ್ದೇವೆ. ಅಲ್ಲದೆ ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸೃಜನಶೀಲತೆ ಗುರುತಿಸುವುದೇ ನಿಜವಾದ ಶಿಕ್ಷಣದ ಉದ್ದೇಶ. ಪ್ರತಿಭೆ ಸಾರುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ತಿಳಿಸಿದರು.
2012-13ನೇ ಸಾಲಿನ ಬಿಕಾಂ ಪದವಿಯಲ್ಲಿ ವಿವಿಗೆ ಪ್ರಥಮ ರ್ಯಾಂಕ್ ಗಳಿಸಿ 4 ಚಿನ್ನ ಹಾಗೂ 4 ನಗದು ಬಹುಮಾನಕ್ಕೆ ಪಾತ್ರರಾಗಿರುವ ಸಿಂಧು ಹರೀಶ್ ಹಾಗೂ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಕ್ರೀಡಾಪಟು ಕೃತಿಕಾ ಎಸ್. ರಾಜು ಅವರನ್ನು ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಪರಮಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ ಮುಖ್ಯ ಅತಿಥಿಯಾಗಿದ್ದರು. ಉಪಪ್ರಾಂಶುಪಾಲ ಪ್ರೊ.ವೈ.ಡಿ. ಧನಂಜಯ, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಪ್ರೊ.ಶೈಲಾ ನಾಗರಾಜ್, ಅಧ್ಯಕ್ಷೆ ಎಲ್.ಪೂಜಾ ಇದ್ದರು.