ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಜೆಡಿಎಸ್ ಅಧಿಕಾರಕ್ಕೆ ಬಂದಾಗ ನಂಗೆ ತೃಪ್ತಿ

Rashmi Kasaragodu
Updated On : 5 Apr 2014, 2:10 am

ಹುಣಸೂರು: ಇದು ನನ್ನ ಕೊನೆ ಚುನಾವಣೆ ಅಲ್ಲ, ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ಅಸ್ತಿತ್ವಕ್ಕೆ ತರುವ ಮೂಲಕ ಸಮಾಜದ ಸರ್ವರ ಏಳಿಗೆಗೆ ಶ್ರಮಿಸಿ ಅಭಿವೃದ್ಧಿಪಡಿಸಿದಾಗ ಮಾತ್ರ ನನ್ನ ಜೀವನ ಸಾರ್ಥಕವಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಮುನೇಶ್ವರ ಮೈದಾನದಲ್ಲಿ ಶುಕ್ರವಾರ ಮೈಸೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಪರವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮತಯಾಚಿಸಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ.
ಬಿಜೆಪಿ ಬರಲು ನಾನು ಬಿಡುವುದಿಲ್ಲ. ಈ ಬಗ್ಗೆ ಮತದಾರರು ಗೊಂದಲ ಮಾಡಿಕೊಳ್ಳದೆ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವ ಮೂಲಕ ದೇಶದಲ್ಲಿ ತೃತೀಯ ರಂಗ ಸರ್ಕಾರಕ್ಕೆ ಶಕ್ತಿ ತುಂಬುವಂತೆ ಮನವಿ ಮಾಡಿದರು.
ಈ ಬಾರಿ ನಡೆಯುವ ಚುನಾವಣೆಯಲ್ಲಿ ದೇಶದಲ್ಲಿ ರಾಷ್ಟ್ರೀಯ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ಬೆಂಬಲಿಸಿ ತೃತೀಯ ರಂಗದ ಸರ್ಕಾರ ರಚನೆಗೆ ಶಕ್ತಿ ತುಂಬುವಂತೆ ಮನವಿ ಮಾಡಿದರು.
ಶೋಷಿತ ಮತ್ತು ಬಡವರ ಪರವಲ್ಲದ ಬಿಜೆಪಿ ಮತ್ತು ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಬೆಂಬಲಿಸಬೇಕು. ನನ್ನ ಮನೆಯಲ್ಲಿ ತಿಂದು ಬೆಳೆದವರೆ ನನಗೆ ದ್ರೋಹ ಮಾಡಿ ಹೊರಗೆ ಹೋಗಿ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಯಾರೂ ಯಾರ ಬಗ್ಗೆಯೂ ಏನನ್ನೂ ಬೇಕಾದರೂ ಮಾತನಾಡಿಕೊಳ್ಳಲಿ ಆ ಬಗ್ಗೆ ನನಗೆ ನೋವಿಲ್ಲ. ಆ ದೇವರೆ ಅವರಿಗೆ ಶಿಕ್ಷೆ ನೀಡುತ್ತಾನೆ ಎಂದರು.
ಹುಣಸೂರು ಕ್ಷೇತ್ರದಲ್ಲಿ ನಾಯಕರಿಲ್ಲದೆ ಕಾರ್ಯಕರ್ತರು ಅನಾಥರಾಗಿದ್ದಾರೆ. ಆದ್ದರಿಂದ ಜಿ.ಡಿ. ಹರೀಶ್ ಗೌಡ ಅವರಿಗೆ ನಾಯಕತ್ವ ನೀಡಿದರೆ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಮತ ನೀಡಲು ಸಾಧ್ಯ ಎಂದು ಕಾರ್ಯಕರ್ತರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಒಮ್ಮತದ ಅಭಿಪ್ರಾಯಕ್ಕೆ ತಾವು ಬದ್ಧ. ಯಾರನ್ನು ಬೇಕಾದರೂ ಮುಖಂಡರನ್ನಾಗಿ ಬೆಳೆಸುವ, ತುಳಿಯುವುದು ನಿಮಗೆ ಸೇರಿದ್ದು ಎಂದರು.
ಶಾಸಕರಾದ ಜಿ.ಟಿ ದೇವೇಗೌಡ, ಎಸ್.ಚಿಕ್ಕಮಾದು, ಸಾ.ರಾ. ಮಹೇಶ್ ಮಾತನಾಡಿದರು. ಮುಖಂಡರಾದ ಎಚ್.ಎಂ. ಫಜಲುಲ್ಲಾ, ಜಿ.ಡಿ. ಹರೀಶ್ಗೌಡ, ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ, ಗಣೇಶ್ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement