ಬಿಜೆಪಿಗೆ ಅಧಿಕಾರ ನೀಡದಿರಿ
ಟಿ.ನರಸೀಪುರ: ಪ್ರಜಾಪ್ರಭುತ್ವ ದುರ್ಬಲಗೊಳಿಸಿ, ಸಂವಿಧಾನ ಬದಿಗಿರಿಸಿ, ಆಡಳಿತದಲ್ಲಿ ಮನುವಾದಿ ಧೋರಣೆ ಅನುಕರಿಸುವ ಕೋಮುವಾದಿಗಳಿಗೆ ದೇಶದ ಜನತೆ ಕೇಂದ್ರದಲ್ಲಿ ಅಧಿಕಾರ ನೀಡಬಾರದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ತಾಲೂಕಿನ ತಲಕಾಡು ನಾಯಕ ಸಮುದಾಯ ಭವನದಲ್ಲಿ ಶುಕ್ರವಾರ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಪರ ಮತಯಾಚಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ವೇಳೆ ರಾಷ್ಟ್ರೀಯ ಚಿಂತನೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಅಭಿವೃದ್ಧಿಯ ಚರ್ಚೆಗಳು ಆಗಬೇಕು. ಪ್ರಜಾಪ್ರಭುತ್ವ ಭದ್ರಗೊಳಿಸಲು ಕಾಂಗ್ರೆಸ್ಗೆ ಕೇಂದ್ರದಲ್ಲಿ ಮತ್ತೆ ಅಧಿಕಾರ ನೀಡಬೇಕು ಎಂದರು.
ರೈತನಾಗಿ, ರೈತ ಹೋರಾಟದ ಹಿನ್ನೆಲೆಯಿಂದಲೆ ರಾಜಕಾರಣಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭದಲ್ಲಿಯೇ ಬಡವರ ಪರ ಯೋಜನೆಗಳನ್ನು ಘೋಷಿಸಿದರು. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಕೃಷಿ ಬೆಲೆ ಆಯೋಗ ರಚಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನರಸೀಪುರ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಜನರು ತಮ್ಮ ಕೈ ಹಿಡಿದ ಹಿನ್ನೆಲೆಯಲ್ಲಿ ಸಂಸದನಾಗುವ ಅವಕಾಶ ಸಿಕ್ಕಿತು ಎಂದರು.
ಪಾದಯಾತ್ರೆ ಮಾಡಿ ಮತಯಾಚನೆ: ಸಭೆ ಬಳಿಕ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತಲಕಾಡು ಮುಖ್ಯರಸ್ತೆಯಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮಾಜಿ ಶಾಸಕರಾದ ಎಸ್. ಕೃಷ್ಣಪ್ಪ, ಡಾ.ಎನ್.ಎಲ್. ಭಾರತೀಶಂಕರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆ.ವಜ್ರೇಗೌಡ, ಜಿಪಂ ಸದಸ್ಯೆ ಎಂ. ಸುಧಾ ಮಹದೇವಯ್ಯ, ಡಿಸಿಸಿ ಸದಸ್ಯ ಕುಕ್ಕೂರು ಗಣೇಶ್, ಜಿಲ್ಲಾ ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ಹೊನ್ನನಾಯ್ಕ, ರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಚ್. ಮಂಜುನಾಥ್, ಹಿಂಳಿದ ವರ್ಗಗಳ ವಿಭಾಗದ ಅಧ್ಯಕ್ಷ ಸಿದ್ದಶೆಟ್ಟಿ ಇದ್ದರು.