ಭದ್ರತಾ ಪಡೆಗಳ ಪಥ ಸಂಚಲನ
ಕೆ.ಆರ್. ನಗರ: ಏ.17 ರಂದು ನಡೆಯುವ ಲೋಕಸಭಾ ಚುನಾವಣೆಗೆ ತಾಲೂಕಿನ ಮತದಾರರು ನಿರ್ಭಿತಿಯಿಂದ ಮತದಾನ ಮಾಡಲು ಮತ್ತು ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ವತಿಯಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಚ್.ಎನ್. ಸಿದ್ದಯ್ಯ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಕೇಂದ್ರ ಭದ್ರತಾ ಪಡೆಯ ಪಥ ಸಂಚಲನದಲ್ಲಿ ಮಾತನಾಡಿದ ಅವರು, ಮತದಾನದ ದಿನದಂದು ಕಾನೂನು ಸುವ್ಯವಸ್ಥೆ ಕಾಪಾಡಲು ಈಗಾಗಲೇ ಮುಂಜಾಗ್ರತಾ ಕ್ರಮ ವಹಿಸಿದ್ದು, ತಾಲೂಕಿನ 248 ಮತ ಕೇಂದ್ರಗಳಲ್ಲೂ ಸೂಕ್ತ ಬಂದೋಬಸ್ತ್ ಒದಗಿಸಲು ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಿಂದ 60 ಮಂದಿ ಆಗಮಿಸಿದ್ದು, ಇವರನ್ನು ಸ್ಥಳೀಯ ಪೊಲೀಸರ ಜತೆಗೆ ಮತ ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ. ಜತೆಗೆ ಮತದಾನಕ್ಕಿಂತ ಮುನ್ನ ನಡೆಯುವ ಪ್ರಚಾರ ಸಭೆಗಳಲ್ಲಿ ಯಾವುದೇ ರೀತಿಯ ಕಾನೂನಿನ ಲೋಪ ಆಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಅಭ್ಯರ್ಥಿಗಳು ಮತಯಾಚನೆ ಮಾಡುವ ವೇಳೆ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡುವುದಾಗಿ ಮಾಹಿತಿ ನೀಡಿದರು.
ಕೇಂದ್ರದ ಭದ್ರತಾ ಪಡೆಯು ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿ ಜನರಲ್ಲಿ ಕಾನೂನಿನ ಅರಿವು ಮೂಡಿಸುತ್ತಿರುವುದಾಗಿ ತಿಳಿಸಿದರು. ಪ್ರತಿಯೊಬ್ಬ ಮತದಾರನು ನಿರ್ಭಿತಿಯಿಂದ ತಪ್ಪದೆ ಮತದಾನ ಮಾಡಬೇಕೆಂದು ಮನವಿ ಮಾಡಿದರು. ಇದೇ ವೇಳೆ ಕೇಂದ್ರ ಭದ್ರತಾ ಪಡೆಯ ಪೊಲೀಸರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿದರು. ಎಸ್ಐಗಳಾದ ಎಂ. ಷಣ್ಮುಗಂ, ಮಹೇಶ್ ಇದ್ದರು.