ಮೋದಿ ವಿರುದ್ಧ ಏಕಾಂಗಿ ಹೋರಾಟ
ಕ.ಪ್ರ.ವಾರ್ತೆ ಮೈಸೂರು ಏ. 4
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಂದು ವೇಳೆ ಪ್ರಧಾನಿಯಾದರೆ, ಸಂಸತ್ತಿನಲ್ಲಿ ನಾನು ಏಕಾಂಗಿ ಆಗಿಯಾದರೂ ಹೋರಾಟ ನಡೆಸುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಹುದ್ದೆಯನ್ನು ನಿರ್ವಹಿಸುವುದು ತಮಾಷೆ ವಿಷಯ ಅಲ್ಲ. ಗುಜರಾತ್ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿರಬಹುದು. ಆದರೆ ಪ್ರಧಾನಿ ಹುದ್ದೆ ನಿರ್ವಹಣೆ ತಮಾಷೆಯ ಮಾತಲ್ಲ. ಪ್ರಧಾನಿ ಹುದ್ದೆಗೆ ಅರ್ಹ ವ್ಯಕ್ತಿ ಆಡ್ವಾಣಿ ಇದ್ದರೂ ಬಿಜೆಪಿಯಲ್ಲಿ ಮೋದಿಯನ್ನು ಬಿಂಬಿಸಲಾಯಿತು. ಇದಕ್ಕೆ ಕಾರ್ಪೊರೇಟ್ ಕಂಪನಿಗಳು ಮತ್ತು ಮಾಧ್ಯಮಗಳು ಕಾರಣ ಎಂದು ಆರೋಪಿಸಿದರು.
ನಾನು ಪ್ರಧಾನಿಯಾಗಿ ಹತ್ತು ತಿಂಗಳಾದರೂ ಆಡಳಿತ ನಡೆಸಿದ್ದೇನೆ. ಗೋಧ್ರಾ ಹತ್ಯಾಕಾಂಡದ ಬಗ್ಗೆ ನಾನು ಚರ್ಚಿಸಲು ಹೋಗುವುದಿಲ್ಲ. ಒಂದು ವೇಳೆ ಚರ್ಚಿಸಬೇಕು ಎನಿಸಿದರೆ ಸಂಸತ್ತಿನಲ್ಲಿ ಚರ್ಚಿಸುತ್ತೇನೆ. ಗುಜರಾತಿನ 13 ಸ್ಥಳಗಳಿಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿನ ಸರ್ಕಾರ ನನಗೆ ಸೂಕ್ತ ಭದ್ರತೆಯನ್ನೂ ನೀಡಲಿಲ್ಲ ಎಂದು ಟೀಕಿಸಿದ ದೇವೇಗೌಡರು, ಹತ್ತು ತಿಂಗಳ ಆಡಳಿತದಲ್ಲಿ ನಾನು ಮಾಡಿದ ಸಾಧನೆ ಏನು ಎಂಬುದನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದೇನೆ. ಆ ಪೈಕಿ ಒಂದೆ ಒಂದು ಅಂಶ ಸುಳ್ಳು ಎಂದಾದರೆ ಕಾಂಗ್ರೆಸ್ ಅಥವಾ ಬಿಜೆಪಿ ನನ್ನ ವಿರುದ್ಧ ದೂರು ದಾಖಲಿಸಲಿ ಎಂದು ಸವಾಲು ಹಾಕಿದರು.
ತೃತೀಯ ರಂಗಕ್ಕೆ ಭವಿಷ್ಯವಿದೆ: ಬಿಜೆಪಿ ಮತ್ತು ಕಾಂಗ್ರೆಸ್ನ ಮತದಾರರು ಇರುವಂತೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒರಿಸ್ಸಾ, ಬಿಹಾರ, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ಇತರೆ ಪ್ರಾದೇಶಿಕ ಪಕ್ಷಗಳ ಮತದಾರರೂ ಇದ್ದಾರೆ. ಮಧ್ಯಪ್ರದೇಶ ಚುನಾವಣೆ ಮತ್ತು ದೆಹಲಿ ಚುನಾವಣೆಯಲ್ಲಿ ಏನಾಯಿತು ಎಂಬುದನ್ನು ಗಮನಿಸಿದರೆ ಅದು ತಿಳಿಯುತ್ತದೆ. ಒಬ್ಬ ಕೇಜ್ರಿವಾಲ್ ಕೇವಲ 10 ತಿಂಗಳಲ್ಲಿ ಕಾಂಗ್ರೆಸ್ ಮೂಲೆಗುಂಪು ಮಾಡಿದ್ದಾರೆ. ಆದ್ದರಿಂದ ತೃತೀಯ ರಂಗಕ್ಕೆ ದೇಶದಲ್ಲಿ ಬಹುದೊಡ್ಡ ಭವಿಷ್ಯವಂತೂ ಇದೆ. ಈ ಸಂಬಂಧ ನಡೆಸಲಾದ ಸಭೆಯಲ್ಲಿ ನಾನು ಕೆಲವೊಂದು ಸೂಚನೆ ನೀಡಿದ್ದೇನೆ. ತಮ್ಮ ತಮ್ಮ ರಾಜ್ಯಗಳಲ್ಲಿ ತಮಗೆ ಅನುಕೂಲವಾದಂತೆ ಟಿಕೆಟ್ ಹಂಚಿ, ಚುನಾವಣಾ ಫಲಿತಾಂಶ ಬಂದ ಬಳಿಕ ಬಹುಮತ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದರು.
ತೃತೀಯರಂಗ ಕಾಂಗ್ರೆಸ್ನ ಬಿ ತಂಡ ಎಂದು ಕೆಲವರು ಹೇಳಬಹುದು. ಆ ಮಾತಿಗೆ ಹೆಚ್ಚು ಪುರಸ್ಕಾರ ಕೊಡಬೇಕಿಲ್ಲ. ತೃತೀಯ ರಂಗ ಕಾಂಗ್ರೆಸ್ನ ಯಾವ ತಂಡವೂ ಅಲ್ಲ. ರಾಜಕೀಯದಲ್ಲಿ ಇಂಥ ಮಾತುಗಳು ಸರ್ವೆ ಸಾಮಾನ್ಯ. ಕಾಂಗ್ರೆಸ್ನ ಹತ್ತು ವರ್ಷದ ಅವಧಿಯಲ್ಲಿ ಮಾಜಿ ಪ್ರಧಾನಿಯಾದ ನನಗೆ ಸಂಸತ್ನಲ್ಲಿ ಮಾತನಾಡಲೂ ಅವಕಾಶ ನೀಡಲಿಲ್ಲ. ಈಗ ಬಿಜೆಪಿ ನದಿ ಜೋಡಿಸಲು ಹೋಗುತ್ತಿದೆ. ಆದರೆ ನಾನು ಪ್ರಧಾನಿಯಾದ ಹತ್ತು ತಿಂಗಳಲ್ಲಿ ಗಂಗಾ ನದಿ ಸಮಸ್ಯೆ ಬಗೆಹರಿಸಿದ್ದೇನೆ. ಈಗಲೂ ಬಾಂಗ್ಲಾ ಜನತೆ ನನ್ನ ಫೋಟೋ ಇಟ್ಟುಕೊಂಡಿದ್ದಾರೆ. ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಅನೇಕ ಅಫಿಡವಿಟ್ಟುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ ಎಂದು ಹೇಳಿದರು.
ನನ್ನ ಹಣೆ ಬರಹ: ಜೆಡಿಎಸ್ನಲ್ಲಿ ನನ್ನ ಗರಡಿಯಲ್ಲಿಯೇ ಬೆಳೆದವರು ಈಗ ಜೆಡಿಎಸ್ ಮುಗಿಸುತ್ತೇನೆ ಎಂದು ಹೇಳುತ್ತಿರುವುದು ನನ್ನ ಹಣೆ ಬರಹ. ಒಂದೆಡೆ ಕಾಂಗ್ರೆಸ್ನವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 23 ಸ್ಥಾನ ಗೆಲ್ಲುತ್ತದೆ ಎಂದರೆ, ಬಿಜೆಪಿಯವರು 23 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಾರೆ. ಉಳಿದ ಐದು ಸ್ಥಾನಗಳನ್ನು ಯಾರಿಗೆ ಬಿಟ್ಟಿದ್ದಾರೆ. ಬಹುಶಃ ಬಿಜೆಪಿಯವರು ಕಾಂಗ್ರೆಸ್ಗೂ, ಕಾಂಗ್ರೆಸ್ನವರು ಬಿಜೆಪಿಗೂ ಬಿಟ್ಟಿರಬಹುದು. ನಾವು ಬಿಡಿ ಸಣ್ಣ ಪಕ್ಷದವರು. ಮೂರು ಮಂದಿಯೋ ಅಥವಾ ನಾನೊಬ್ಬನೋ ಅಥವಾ ನಾನೂ ಗೆಲ್ಲದೆ ಇರಬಹುದು. ನಾನು ರಾಜ್ಯದೆಲ್ಲಡೆ ಶಕ್ತಿ ಎಂದು ಹೇಳುವುದಿಲ್ಲ ಎಂದರು.
ಮೂಲ ಕಾಂಗ್ರೆಸ್ನವರಿಗೆ ಜೆಡಿಎಸ್ನ ನನ್ನೊಬ್ಬನನ್ನು ಎದುರಿಸುವ ಶಕ್ತಿ ಇರಲಿಲ್ಲ. ಆದ್ದರಿಂದ ನನ್ನ ಗರಡಿಯಲ್ಲಿ ಬೆಳೆದವರನ್ನು ಕರೆದುಕೊಂಡು ಹೋದರು. ಈಗ ನಮ್ಮ ಪಕ್ಷ ಅಸ್ತಿತ್ವದಲ್ಲಿಲ್ಲ ಎಂಬುದನ್ನು ಸಾಬೀತುಪಡಿಸಲು ವಿವಿಧ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿಕೆಗೆ ನಾನು ಯಾವುದೆ ಪ್ರತಿಕ್ರಿಯೆ ನೀಡುವುದಿಲ್ಲ. ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದಿಲ್ಲ. ಎಲ್ಲರಿಗೂ ಬುದ್ಧಿ ಹೇಳಲು ಹೋಗುವುದಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಒಂದು ಬಾರಿಯೂ ಯಾರ ಬಗ್ಗೆಯೂ ಅಸಂವಿಧಾನಿಕ ಪದ ಬಳಕೆ ಮಾಡಿಲ್ಲ. ರೈತರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ರೈತರೆ ಬುದ್ಧಿ ಕಲಿಸುತ್ತಾರೆ. ಯಾರ ಬಗ್ಗೆಯೂ ನಾನು ಪ್ರಮಾಣ ಪತ್ರ ನೀಡುವುದಿಲ್ಲ ಎಂದು ಹೇಳಿದರು.
ಪ್ರಧಾನಿ ಹುದ್ದೆಯನ್ನು ನಿರ್ವಹಿಸುವುದು ತಮಾಷೆ ವಿಷಯ ಅಲ್ಲ. ಗುಜರಾತ್ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿರಬಹುದು. ಆದರೆ ಪ್ರಧಾನಿ ಹುದ್ದೆ ನಿರ್ವಹಣೆ ತಮಾಷೆಯ ಮಾತಲ್ಲ. ಪ್ರಧಾನಿ ಹುದ್ದೆಗೆ ಅರ್ಹ ವ್ಯಕ್ತಿ ಆಡ್ವಾಣಿ ಇದ್ದರೂ ಬಿಜೆಪಿಯಲ್ಲಿ ಮೋದಿಯನ್ನು ಬಿಂಬಿಸಲಾಯಿತು. ಇದಕ್ಕೆ ಕಾರ್ಪೊರೇಟ್ ಕಂಪನಿಗಳು ಮತ್ತು ಮಾಧ್ಯಮಗಳು ಕಾರಣ. ನಾನು ಪ್ರಧಾನಿಯಾಗಿ ಹತ್ತು ತಿಂಗಳಾದರೂ ಆಡಳಿತ ನಡೆಸಿದ್ದೇನೆ. ಗೋಧ್ರಾ ಹತ್ಯಾಕಾಂಡದ ಬಗ್ಗೆ ನಾನು ಚರ್ಚಿಸಲು ಹೋಗುವುದಿಲ್ಲ. ಒಂದು ವೇಳೆ ಚರ್ಚಿಸಬೇಕು ಎನಿಸಿದರೆ ಸಂಸತ್ತಿನಲ್ಲಿ ಚರ್ಚಿಸುತ್ತೇನೆ. ಗುಜರಾತಿನ 13 ಸ್ಥಳಗಳಿಗೆ ಭೇಟಿ ನೀಡಿದ್ದೆ. ಆದರೆ ಅಲ್ಲಿನ ಸರ್ಕಾರ ನನಗೆ ಸೂಕ್ತ ಭದ್ರತೆಯನ್ನೂ ನೀಡಲಿಲ್ಲ.
ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ