ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸ್ವಾರ್ಥಕ್ಕಾಗಿ ಅಲ್ಲ, ದೇಶಕ್ಕಾಗಿ ಬಂದಿದ್ದೇನೆ

Rashmi Kasaragodu
Updated On : 5 Apr 2014, 2:09 am

ಮೈಸೂರು: ಮತ್ತೊಮ್ಮೆ ಪ್ರಧಾನಮಂತ್ರಿಯಾಗುವ ಆಸೆ ನನಗಿಲ್ಲ. ಸಂಕಷ್ಟದಲ್ಲಿರುವ ದೇಶವನ್ನು ಪಾರು ಮಾಡಲು ನಿಮ್ಮ ಬಳಿ ಬಂದಿದ್ದೇನೆ. ಜಾತಿ, ಮತ, ಪಕ್ಷ ಮರೆತು ಎಲ್ಲರೂ ನಮಗೆ ಬೆಂಬಲ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮನವಿ ಮಾಡಿದರು.
ಶುಕ್ರವಾರ ನಗರದಲ್ಲಿ ನಡೆದ ಜೆಡಿಎಸ್ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ವಿಶ್ರಾಂತಿಯ ಅವಶ್ಯಕತೆ ಇಲ್ಲ. ಮತ್ತೊಮ್ಮೆ ಪ್ರಧಾನಿ ಆಗುತ್ತೇನೆ ಎಂಬ ಭ್ರಮೆಯೂ ಇಲ್ಲ. ಪಕ್ಷ, ವ್ಯಕ್ತಿ ಪ್ರತಿಷ್ಠೆಗಿಂತ ದೇಶ ಮುಖ್ಯ. ಎರಡು ರಾಷ್ಟ್ರೀಯ ಪಕ್ಷಗಳು ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿವೆ. ದೇಶದ ಸ್ಥಿತಿ ತೀರಾ ಹದಗೆಟ್ಟಿದ್ದು ಅದನ್ನು ಕಾಪಾಡುವ ಹೊಣೆ ನಿಮ್ಮೆಲ್ಲರ ಮೇಲಿದೆ ಎಂದರು.
ದೇಶ ಆಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಜನರಿಗೆ ದ್ರೋಹ ಮಾಡಿವೆ. ಅದೇ 10 ತಿಂಗಳ ಆಡಳಿತ ನಡೆಸಿದ ನಾನು ದಿನಕ್ಕೆ 20 ಗಂಟೆ ದುಡಿದು ಬಡವರು, ಅಲ್ಪಸಂಖ್ಯಾತರು, ಮಹಿಳೆಯರ ಪರ ಕೆಲಸ ಮಾಡಿದೆ. ಇದನ್ನು ಕಂಡು ಸಹಿಸದ ಕಾಂಗ್ರೆಸ್ ಪ್ರಧಾನಿ ಪಟ್ಟದಿಂದ ಇಳಿಸಿತು. ಬಿಜೆಪಿಯಲ್ಲಿ ಬಹುಕಾಲ ಸೇವೆ ಸಲ್ಲಿಸಿದ ಲೋಹದ ಪುರುಷ ಎಲ್.ಕೆ. ಆಡ್ವಾಣಿ ಅವರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ಗಮನಿಸಬೇಕು. ಅದೇ ರೀತಿ ನರೇಂದ್ರ ಮೋದಿಗೆ ಕಾರ್ಪೊರೇಟ್ ವಲಯ ಹಣ ಬಲ ನೀಡುತ್ತಿದೆ. ಇವರ್ಯಾರಿಂದಲೂ ದೇಶ ಉಳಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ನಾನು ಒಕ್ಕಲಿಗರ ಪ್ರತಿನಿಧಿಯಲ್ಲ: ದೇವೇಗೌಡ ಒಬ್ಬ ಒಕ್ಕಲಿಗರ ಪ್ರತಿನಿಧಿ ಎನ್ನುತ್ತಾರೆ. ನಾನು ಮನುಷ್ಯರ ಪ್ರತಿನಿಧಿ. ನಮ್ಮ ತಾಯಿ ಭಾರತ ಮಾತೆ. ಇದೇ ದೇವೇಗೌಡ ಮುಖ್ಯಮಂತ್ರಿಯಾಗಿದ್ದಾಗ 36 ಮಂದಿ ಒಕ್ಕಲಿಗರ, 60 ಮಂದಿ ವೀರಶೈವರು, 3 ಮಂದಿ ಕುರುಬರು ಇದ್ದರು. ಆಗ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಯಾರ್ಯಾರಿಗೆ ಎಷ್ಟೆಷ್ಟು ಅಧಿಕಾರ ಕೊಡಬೇಕು ಅಷ್ಟು ನೀಡಿದೆ. ಅಂದಿನ ಫಲಾನುಭವಿಗಳು ಇಂದು ಆತ್ಮಶೋಧನೆ ಮಾಡಿಕೊಳ್ಳಬೇಕು ಎಂದು ಹೆಸರೇಳದೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ನಾನು ಪ್ರತಿನಿಧಿಸುವ ಕ್ಷೇತ್ರದಿಂದ ಗೆದ್ದವರು ಎಲ್ಲ ಕಾಲದಲ್ಲೂ ಅಧಿಕಾರದಲ್ಲಿ ಇದ್ದವರೆ. ಆದರೆ, ಕ್ಷೇತ್ರದ ಜನತೆ ಕುಡಿಯುವ ನೀರು, ವಿದ್ಯುತ್ ಕೊರತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಿಂದೆ ಗೆದ್ದವರು ಗುರುತರ ಕೊಡುಗೆ ನೀಡಲಿಲ್ಲ. ಆದ್ದರಿಂದ ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ದೆಸೆಯಿಂದ ಲೋಕಸಭಾ ಚುನಾವಣೆಗೆ ನಿಲ್ಲಲು ಹಿಂದೇಟು ಹಾಕಿದೆ. ಈಗ ನಮಗೆ ಚಂದ್ರಶೇಖರಯ್ಯ ಸಿಕ್ಕಿದ್ದಾರೆ. ಎಲ್ಲರೂ ಭಿನ್ನಾಭಿಪ್ರಾಯ ಮರೆತು ಅಭ್ಯರ್ಥಿಯ ಗೆಲುವಿಗಾಗಿ ದುಡಿಯುವಂತೆ ಕರೆ ನೀಡಿದರು.
ಶಾಸಕರಾದ ಸಾ.ರಾ. ಮಹೇಶ್, ಎಸ್.ಚಿಕ್ಕಮಾದು, ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ, ಅಭ್ಯರ್ಥಿ ಚಂದ್ರಶೇಖರಯ್ಯ, ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಬೆಳವಾಡಿ ಶಿವಮೂರ್ತಿ, ಜಿ.ಡಿ. ಹರೀಶ್ಗೌಡ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement