ದಲಿತರು ವಿಶ್ವನಾಥ್ ಬೆಂಬಲಿಸುವಂತೆ ಮನವಿ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಅವರನ್ನು ದಲಿತ ಸಮುದಾಯ ಬೆಂಬಲಿಸುವಂತೆ ನಗರ ಕಾಂಗ್ರೆಸ್ ಎಸ್ಸಿ ವಿಭಾಗದ ಅಧ್ಯಕ್ಷ ಆರ್.ಸೋಮಸುಂದರ್ ಮನವಿ ಮಾಡಿದ್ದಾರೆ. ದೀನ- ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಅಸಹಾಯಕ ಸಮುದಾಯಗಳ ಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ವಿಶ್ವನಾಥ್ ಅವರನ್ನು ಪುನರಾಯ್ಕೆ ಮಾಡಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ತಕ್ಷಣ ಅಹಿಂದ ಪರ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಇದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸುತ್ತಿದ್ದು, ಇಂತಹ ಅಪಪ್ರಚಾರಗಳಿಗೆ ಕಿವಿಗೊಡದೆ ದಲಿತ ಸಮುದಾಯ ಕಾಂಗ್ರೆಸ್ ಕೈ ಹಿಡಿಯಬೇಕಿದೆ ಎಂದು ಕೋರಿದ್ದಾರೆ.
ಕಾರ್ಮಿಕರಿಂದ ಬಾಬೂಜಿಗೆ ಗೌರವ
ಮೈಸೂರು: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಜನ್ಮದಿನವನ್ನು ಡಾ.ಬಾಬು ಜಗಜೀವನರಾಂ ಚರ್ಮ ಕುಶಲ ಕಾರ್ಮಿಕರ ಸಂಘ ಆಚರಿಸಿತು. ಜೆಎಲ್‌ಬಿ ರಸ್ತೆಯಲ್ಲಿರುವ ರೇಲ್ವೆ ನಿಲ್ದಾಣದ ಮುಂಭಾಗವಿರುವ ಬಾಬೂಜಿ ಪ್ರತಿಮೆಗೆ ಮುಖಂಡರು ಮಾಲಾರ್ಪಣೆ ಮಾಡಿದರು. ಸಂಘದ ಅಧ್ಯಕ್ಷ ಟಿ. ನಾರಾಯಣ್, ಮುಖಂಡರಾದ ಕಾಳಯ್ಯ, ಬಿ.ಪ್ರಸಾದ್, ಸುಭಾಷ್, ಪುಟ್ಟಯ್ಯ, ಮಾಣಿಕ್ಯಂ, ನರಸಿಂಹ, ಸೋಮಶೇಖರ್, ಹರೀಶ್.ಎಸ್. ಶಂಕರ್. ಈಶ್ವರ್ ಮುಂತಾದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.