ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪ್ರಾದೇಶಿಕ ಪಕ್ಷಗಳಿಂದ ಪರಿಹಾರ ಸಾಧ್ಯ

Rashmi Kasaragodu
Updated On : 6 Apr 2014, 1:05 am

ಕ.ಪ್ರ.ವಾರ್ತೆ  ನಂಜನಗೂಡು  ಏ. 5
ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಿಲ್ಲ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾವರ್ಧಕ ಶಾಲೆಯ ಆವರಣದಲ್ಲಿ ಶನಿವಾರ ತಾಲೂಕು ಜೆಡಿಎಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಶಿವಣ್ಣ ಪರ ಮತಯಾಚಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು 67 ವರ್ಷವಾದರೂ ಈ ರಾಜ್ಯದ ಅನೇಕ ಯೋಜನೆಗಳು ನಿರೀಕ್ಷಿತ ರೀತಿಯಲ್ಲಿ ಪ್ರಗತಿ ಕಂಡಿಲ್ಲ. ಅದಕ್ಕೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳೇ ಕಾರಣ. ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಆಶೀರ್ವದಿಸಿ 14 ಸ್ಥಾನ ಗೆದ್ದರೆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ರು.ಗೆ ಬಡವರಿಗೆ ಅಕ್ಕಿ ನೀಡುತ್ತಿರುವುದು ಸ್ವಾಗತ. ಆದರೆ, ಈ ಯೋಜನೆಯಿಂದ ಬಡವರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ರಾಜಕೀಯವಾಗಿ ಮೇಲೆ ಬಂದು, ಈಗ ಆ ಪಕ್ಷದ ಬಗ್ಗೆ ಕೇವಲವಾಗಿ ಮಾತನಾಡುವುದು ಸರಿಯಲ್ಲ. ಅಪ್ಪ- ಮಕ್ಕಳ ಪಕ್ಷವೆಂದು ಟೀಕಿಸುವುದನ್ನು ನಿಲ್ಲಿಸಿ, ಸಿಕ್ಕಿರುವ ಅವಕಾಶವನ್ನು ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಿ ಎಂದು ತಿಳಿಸಿದರು.
ಸಾಲ ಮಾಡಿದ್ದೀರಿ: 20 ತಿಂಗಳ ನನ್ನ ಅಧಿಕಾರಾವಧಿಯಲ್ಲಿ ಬಡವರಿಗಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಆದರೆ ಸಾಲ ಮಾಡಿ ಜನರಿಗೆ ಹೊರೆ ಮಾಡಿಲ್ಲ, ಆರ್ಥಿಕ ತಜ್ಞರಾದ ನೀವು ತಮ್ಮ 9 ತಿಂಗಳ ಅಧಿಕಾರಾವಧಿಯಲ್ಲಿ 17 ಸಾವಿರ ಕೋಟಿ ಸಾಲ ಮಾಡಿದ್ದೀರಿ ಎಂದು ಆರೋಪಿಸಿದರು.
ರಾಜ್ಯದಲ್ಲಿ 5 ವರ್ಷ ಆಡಳಿತ ಮಾಡಿದ ಬಿಜೆಪಿ ಸರ್ಕಾರ ತಮ್ಮ ಸಾಧನೆಗಳ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡದೆ, ಕೇವಲ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮಂತ್ರ ಜಪಿಸುತ್ತಿದ್ದಾರೆ ಎಂದರು.
ಬಿಜೆಪಿ, ಕೆಜೆಪಿಗಳು ವಿಲೀನವಾಗಿದ್ದರೂ ಮಾನಸಿಕವಾಗಿ ಒಂದಾಗಿಲ್ಲದೇ ಒಡೆದ ಮನೆಯಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿವಿಧ ಜನಾಂಗದ ಸಮಾವೇಶ ನಡೆಸಿ, ಸಮುದಾಯ ಭವನಗಳ ನಿರ್ಮಾಣದಿಂದ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿಲ್ಲ ಎಂದರಲ್ಲದೇ, ನಾನು ಎಂದೂ ಜಾತಿ ರಾಜಕೀಯ ಮಾಡಿಲ್ಲ ಎಂದು ಅವರು ತಿಳಿಸಿದರು.
ಶಾಸಕ ಎಸ್.ಚಿಕ್ಕಮಾದು ಮಾತನಾಡಿ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಲ್ಕು ಕ್ಷೇತ್ರದಲ್ಲಿ ಮುಂದಿದೆ. ಮುಂದಿನ ದಿನಗಳಲ್ಲಿ ಲೋಕಸಭೆಯ 8 ಕ್ಷೇತ್ರಗಳಲ್ಲೂ ಜೆಡಿಎಸ್ ಬಹುಮತ ಪಡೆದು ಪ್ರಾದೇಶಿಕ ಪಕ್ಷ ಗೆಲ್ಲುವ ಮೂಲಕ ಬಾವುಟ ಹಾರಿಸುತ್ತಾರೆಂದು ಭವಿಷ್ಯ ನುಡಿದರು.
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಶಿವಣ್ಣ ಮಾತನಾಡಿ, ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಅಲೆಯಿದ್ದು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಮಾಡಿದ ಸಾಧನೆಯೇ ಶ್ರೀ ರಕ್ಷೆಯಾಗಲಿದೆ ಎಂದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್. ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಕಳಲೆ ಕೇಶವಮೂರ್ತಿ, ಪುರಸಭಾಧ್ಯಕ್ಷೆ ಮೀನಾಕ್ಷಿ, ಪಟ್ಟಣ ಜೆಡಿಎಸ್ ಅಧ್ಯಕ್ಷ ಎನ್.ಎಂ.ಮಂಜುನಾಥ್, ಮಾಜಿ ಜಿಪಂ ಉಪಾಧ್ಯಕ್ಷ ಶಂಕರಪ್ಪ, ಮಾಜಿ ಪುರಸಭಾಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಬಿ. ಚಲುವರಾಜು, ವಿಜಯಾಂಬಿಕಾ, ದೊಡ್ಡಮಾದಯ್ಯ, ಖಾಲಿದ್ ಅಹಮದ್, ರಾಮಕೃಷ್ಣ, ಬಾಬು, ಮಾಜಿ ಸದಸ್ಯ ರಾಜೇಶ, ಮಹದೇವನಾಯಕ, ಸುಬ್ರಹ್ಮಣ್ಯ, ಬಸವರಾಜು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement