ಮಾನವ ಅಭಿವೃದ್ಧಿಗೆ ಚಿಂತಿಸುವ ಅಗತ್ಯವಿದೆ
ಹುಣಸೂರು: ಮಾನವ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಸಾಕಷ್ಟು ಅವಕಾಶ ಕಲ್ಪಿಸಿದ್ದರೂ ಸಹ ನಮ್ಮನ್ನಾಳುವ ಸರ್ಕಾರಗಳು ಗಮನಹರಿಸಲಿಲ್ಲ. ಇನ್ನು ಮುಂದಾದರು ಸರ್ಕಾರ ಕ್ರಮ ವಹಿಸಬೇಕಿದೆ ಎಂದು ಕಾಲೇಜು ಶಿಕ್ಷಣ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಸಿ.ಕೆ. ಮಹೇಶ್ವರಪ್ಪ ಹೇಳಿದರು. ಪಟ್ಟಣದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಮಾನವ ಅಭಿವೃದ್ಧಿ, ಸಬಲೀಕರಣ ಮತ್ತು ಸಾಮರ್ಥ್ಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಅರಸರ ಅವಧಿಯಲ್ಲಿ ಭೂಸುಧಾರಣೆ ಕಾಯ್ದೆ, ಶೋಷಿತ ವರ್ಗಗಳಿಗೆ ಮೀಸಲಾತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಎಲ್ಲಾ ದುರ್ಬಲ ವರ್ಗ- ಜಾತಿಗಳ ಸಬಲೀಕರಣಕ್ಕೆ ಕಾರಣವಾಗಿದ್ದರು ಎಂದರು. ಉಡುಪಿಯ ಮಿಲಾಗ್ರೀಸ್ ಕಾಲೇಜಿನ ಪ್ರಾಂಶುಪಾಲ ಡಾ.ನೆರಿಕಾರ್ನೆಲಿಯೋ, ಪ್ರಾಂಶುಪಾಲ ಪ್ರೊ.ಎಚ್.ಸಿ. ಲೋಹಿತಾಶ್ವ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ. ನದ್, ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ಗಣೇಶ್ ಇದ್ದರು.