ಎಳೆಯರ ಮೇಳಕ್ಕೆ ಚಾಲನೆ
ಮೈಸೂರು: ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಶಾಲಾ ಸಮುಚ್ಚಯದಲ್ಲಿ ಏರ್ಪಡಿಸಿರುವ ಎಳೆಯರ ಮೇಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಶಾಲಾ ಆವರಣದ ಕಲಾಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಚಾಲನೆ ನೀಡಿ, ಮಕ್ಕಳು ಚಲವಲನದಿಂದ ಇರಲು ಇಂತಹ ಶಿಬಿರ ಪ್ರಯೋಜನಕಾರಿಯಾದದು. ಮಕ್ಕಳಲ್ಲಿರುವ ಸಂಕೋಚ, ಕೀಳರಿಮೆ ತೊಲಗಿಸಿ ವಿಶಾಲ ಮನೋಭಾವ ಬೆಳೆಸಬಹುದು. ಬದಲಾದ ಕಾಲಮಾನದಲ್ಲಿ ಪರಸ್ಪರ ಪ್ರೀತಿ ಕಡಿಮೆಯಾಗುತ್ತಿದೆ. ಅದರ ಪುನರ್ ಧ್ರುವೀಕರಣಕ್ಕೆ ನಾವೆಲ್ಲ ಮಂದಾಗಬೇಕು ಎಂದು ಶುಭ ಹಾರೈಸಿದರು. ಒಟ್ಟು 20 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ತಜ್ಞರು ರಂಗದಾಟಗಳು, ಜೇಡಿಮಣ್ಣಿನ ಕಲೆ, ನೃತ್ಯ, ನಾಟಕ, ಪವಾಡ ರಹಸ್ಯ ಬಯಲು ಸೇರಿದಂತೆ ಇತರೆ ಚಟುವಟಿಕೆಗಳನ್ನು ಹೇಳಿಕೊಡುವರು. ಆಕಾಶವಾಣಿ ಉಪ ನಿರ್ದೇಶಕ ಡಾ.ಆನಂದ ಪಾಟೀಲ, ಜೆಎಸ್‌ಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಲೋಕೇಶ ಮೂರ್ತಿ ಇದ್ದರು.
ಚೈತ್ರ ರಂಗೋತ್ಸವ ಇಂದಿನಿಂದ
ಮೈಸೂರು: ಜಿಪಿಐಇಆರ್ ರಂಗತಂಡವು ತನ್ನ 20ನೇ ವಾರ್ಷಿಕೋತ್ಸವ ಮತ್ತು ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಏ.7 ರಿಂದ 11 ರವರೆಗೆ ಚೈತ್ರ ರಂಗೋತ್ಸವವನ್ನು ರಂಗಾಯಣದ ವನರಂಗದಲ್ಲಿ ಆಯೋಜಿಸಿದೆ. ಪ್ರಗತಿಪರ ಚಿಂತಕ ಪ.ಮಲ್ಲೇಶ್ ರಂಗೋತ್ಸವ ಉದ್ಘಾಟಿಸಲಿದ್ದು, ರಂಗಾಯಣ ನಿರ್ದೇಶಕ ಎಚ್.ಜನಾರ್ದನ್ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ಮತ್ತು ರಂಗಭೂಮಿ ಕಲಾವಿದರಾದ ಶಶಿಧರ ಅಡಪ, ರಂಗಾಯಣ ರಘು, ಅರುಣ್ ಸಾಗರ್, ಧನಂಜಯ್, ವಾಸು ದೀಕ್ಷಿತ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ತಂಡದ ನಿರ್ದೇಶಕ ಮೈಮ್ ರಮೇಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಏ.7ಕ್ಕೆ ಬಸ್ತಿ, ಏ.8ಕ್ಕೆ ಥ್ಯಾಂಕ್ಯೂ ಮಿ. ಗ್ಲ್ಯಾಡ್, ಏ.9ಕ್ಕೆ ಗಿರಿಜಾ ಕಲ್ಯಾಣ, ಏ.10ಕ್ಕೆ ಸಂಸಾರದಲ್ಲಿ ಸನಿದಪ, ಏ. 11ಕ್ಕೆ ಬುಗುರಿ ನಾಟಕ ಪ್ರದರ್ಶನ ನಡೆಯುವುದು. ಈ ಎಲ್ಲಾ ನಾಟಕಗಳು ಪ್ರತಿದಿನ ಸಂಜೆ 7ಕ್ಕೆ ಪ್ರದರ್ಶನವಾಗಲಿದೆ. ಪ್ರವೇಶ ದರವನ್ನು 30 ನಿಗದಿಪಡಿಸಲಾಗಿದೆ. ರಂಗತಂಡದ ಸಂಚಾಲಕರಾದ ವಿಜಯ್ ಮತ್ತು ಗೌತಮ್ ಇದ್ದರು.