ಕದಗಾರೇಶ್ವರ ಜಾತ್ರೆ
ಅಂತರಸಂತೆ: ಸಮೀಪದ ಹೊಸಮಾಳ ಗ್ರಾಮದಲ್ಲಿ ಏ.11 ಮತ್ತು 12ರಂದು ಶ್ರೀ ಕದಗಾರೇಶ್ವರ ಜಾತ್ರಾ ಮಹೋತ್ಸವವು ಈ ಬಾರಿ ವಿಜೃಂಭಣೆಯಿಂದ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಮದ ಮುಖಂಡರು ಕೋರಿದ್ದಾರೆ.
ಭೇರ್ಯದಲ್ಲಿ ಜಾತ್ರೆ
ಭೇರ್ಯ: ಭೇರ್ಯದ ಗ್ರಾಮದೇವತೆ ಶ್ರೀಕರಿಯಮ್ಮ ದೊಡ್ಡಮ್ಮ ಸಿಡಿ ಮಹೋತ್ಸವವು ಏ.22 ರಂದು ಹಾಗೂ ಜಾತ್ರಾ ಮಹೋತ್ಸವವು ಏ.23ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀ ಕರಿಯಮ್ಮ ದೊಡ್ಡಮ್ಮ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಕುಮಾರಸ್ವಾಮಿ ಹೇಳಿದ್ದಾರೆ. ಯುಗಾದಿ ಹಬ್ಬ ಕಳೆದ ನಂತರ 15 ದಿನಕ್ಕೆ ನಡೆಯಬೇಕಿದ್ದ ಸಿಡಿ ಮತ್ತು ಜಾತ್ರೆಯನ್ನು ಲೋಕಸಭಾ ಚುನಾವಣೆ ಹಿನ್ನೆಲೆ ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಬಸ್ ಮತ್ತು ಇತರೆ ವ್ಯವಸ್ಥೆ ಇಲ್ಲದಿರುವುದರಿಂದ ಸಿಡಿ ಮತ್ತು ಜಾತ್ರೆಯನ್ನು ಮುಂದೂಡಲಾಗಿದೆ. ಚುನಾವಣೆ ಕಳೆದ ಮೇಲೆ ಏ.22 ಮತ್ತು 23 ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಂದೇ ಶ್ರೀಕರಿಯಮ್ಮ ದೊಡ್ಡಮ್ಮ ಸಿಡಿ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ. ಭಕ್ತಾದಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ತಪ್ಪಿದ ಅನಾಹುತ
ಹುಣಸೂರು: ಹನಗೋಡು ಸಮೀಪದ ಕಡೆ ಮನುಗನಹಳ್ಳಿಯಲ್ಲಿ ಶನಿವಾರ ಸಂಜೆ ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ಪ್ರವಹಿಸಿದ್ದರೂ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಗ್ರಾಮದ ಲಕ್ಷ್ಮಿ ದೇವಿ ದೇವಾಲಯದ ಬೀದಿಯಲ್ಲಿ ಶನಿವಾರ ಸಂಜೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ತಂತಿ ತುಂಡಾಗಿ ಬಿದ್ದಿತ್ತಾದರೂ, ತಕ್ಷಣ ಎಚ್ಚೆತ್ತ ಸಾರ್ವಜನಿಕರು ಟ್ರಾನ್ಸ್‌ಫಾರ್ಮರ್‌ನ ಸಂಪರ್ಕ ಕಡಿತಗೊಳಿಸಿ ಅನಾಹುತ ತಪ್ಪಿಸಿದರು. ಸೆಸ್ಕ್ ಸಿಬ್ಬಂದಿ ಮಾಹಿತಿ ದೊರೆತರೂ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕತ್ತಲೆಯಲ್ಲಿ ಇರುವಂತಾಯಿತು. 30 ವರ್ಷಗಳಷ್ಟು ಹಳೆಯದಾದ ವಿದ್ಯುತ್ ತಂತಿಯನ್ನು ಬದಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಕಲೆ ಶಿಬಿರ
ಕುವೆಂಪುನಗರದಲ್ಲಿರುವ ದಿ ಆರ್ಟ್ ಆಫ್ ಲೀವಿಂಗ್‌ನ ವ್ಯಕ್ತಿ ವಿಕಾಸ ಕೇಂದ್ರದಲ್ಲಿ ಏ.8 ರಿಂದ 13 ರವರೆಗೆ ಜೀವನ ಕಲೆಯ ಸಂತಸದ ಶಿಬಿರ ನಡೆಸಲಿದ್ದು, ಮೊ. 98459 63387 ಸಂಪರ್ಕಿಸಬಹುದು.
ರಂಗೋಲಿ ಸ್ಪರ್ಧೆ
ಪ್ರಚ್ಚನ್ನ ಜೈನ್ ಅಸೋಸಿಯೇಷನ್‌ನಿಂದ ಮಹಾವೀರ ಜಯಂತಿ ಅಂಗವಾಗಿ ಜೈನ ಸಂಕೇತ, ಲಾಂಛನ, ಚಿಹ್ನೆಗಳ ಕುರಿತ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ ಏರ್ಪಡಿಸಿದ್ದು, ಆಸಕ್ತರು ಏ.8 ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಮೊ. 94802 87194 ಸಂಪರ್ಕಿಸಬಹುದು.