ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕಾಂಗ್ರೆಸ್ ಬೆಂಬಲಿಸದಿರಿ: ಮಹೇಶ್

Rashmi Kasaragodu
Updated On : 7 Apr 2014, 12:55 pm

ಟಿ. ನರಸೀಪುರ: ಕಾಂಗ್ರೆಸ್ ದಲಿತರಿಗೆ ಪ್ರಧಾನಿ ಮತ್ತು ಮುಖ್ಯಮಂತ್ರಿಯಾಗಲು ಅವಕಾಶ ನೀಡದೆ ಸಮುದಾಯವನ್ನು ನಿರಂತರವಾಗಿ ವಂಚಿಸುತ್ತಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ದಲಿತ ಸಮುದಾಯಗಳು ಬೆಂಬಲಿಸಬಾರದು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಎನ್.ಮಹೇಶ್ ಕರೆ ನೀಡಿದರು.
ತಾಲೂಕಿನ ಸೋಸಲೆಯಲ್ಲಿ ಶನಿವಾರ ಪಾದಯಾತ್ರೆ ಮಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಎನ್.ಶಿವಮಲ್ಲು ಅವರ ಪರ ಮತಯಾಚಿಸಿ, ಬಹಿರಂಗ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕಳೆದ ಆರು ದಶಕಗಳಿಂದಲೂ ದಲಿತರ ಮತಗಳನ್ನು ಪಡೆದುಕೊಂಡ ಕಾಂಗ್ರೆಸ್ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಕೇಂದ್ರದಲ್ಲಿ ಪ್ರಧಾನಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದರು.
ಮಾಜಿ ಉಪ ಪ್ರಧಾನಿ ಬಾಬುಜಗಜೀವನ್‌ರಾಂ ಅವರಿಗೆ ದೇಶದ ಪ್ರಧಾನಿಯಾಗುವ ಉತ್ತಮ ಅವಕಾಶವಿತ್ತು. ಅವರನ್ನು ಪ್ರಧಾನಿ ಮಾಡದ ಕಾಂಗ್ರೆಸ್ ಚರಣ್‌ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ರಾಜ್ಯದಲ್ಲಿ ಹಿಂದಿನ ಎಸ್.ಎಂ. ಕೃಷ್ಣ ಸರ್ಕಾರ, ಧರ್ಮಸಿಂಗ್‌ರ ಸಮ್ಮಿಶ್ರ ಸರ್ಕಾರ ಹಾಗೂ ಈಗಿನ ಸಿದ್ದರಾಮಯ್ಯ ಸರ್ಕಾರದಲ್ಲಿಯೂ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಬ್ಬರಿಗೂ ಸಿಎಂ ಸ್ಥಾನ ಅಲಂಕರಿಸುವ ಅವಕಾಶವನ್ನು ವ್ಯವಸ್ಥಿತವಾಗಿಯೇ ತಪ್ಪಿಸಲಾಯಿತು ಎಂದರು.
ತಾಲೂಕಿನ ಇಂಡವಾಳು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವಿದ್ದ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಘಟನೆಯನ್ನು ಬಿಎಸ್ಪಿ ರಾಜ್ಯ ಸಂಯೋಜಕ ಎನ್. ಮಹೇಶ್ ತೀವ್ರವಾಗಿ ಖಂಡಿಸಿದ್ದಾರೆ.
ಚಪ್ಪಲಿಹಾರ- ಖಂಡನೆ: ಇಂಡವಾಳು ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ಸಮಾಜದಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಾನೂನಡಿ ಶಿಕ್ಷೆಗೊಳಪಡಿಸಬೇಕು ಎಂದರು.
ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆಯ ಹಿನ್ನೆಲೆ ಸಿದ್ದನಹುಂಡಿ ಗ್ರಾಮದಲ್ಲಿರುವ ಬಾಬೂಜಿ ಭಾವಚಿತ್ರಕ್ಕೆ ಎನ್. ಮಹೇಶ್ ಹಾರ ಹಾಕಿ ನಮಿಸಿದರು.
ಬಿಎಸ್ಪಿ ಕ್ಷೇತ್ರಾಧ್ಯಕ್ಷ ಬಿ.ಆರ್.ಪುಟ್ಟಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಮರಿಮಹದೇವಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಪ್ರಭುಸ್ವಾಮಿ, ಕಾರ್ಯದರ್ಶಿ ಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪುಟ್ಟಮರುಡಯ್ಯ, ಉಪಾಧ್ಯಕ್ಷ ಬಿ. ಮಹದೇವಸ್ವಾಮಿ, ವಕೀಲರಾದ ರಾಜಣ್ಣ, ಜಗದೀಶ, ಮುಖಂಡರಾದ ಸೋಮಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement