ನವೀನ ಬೋಧನಾ ಕ್ರಮ ಕಾರ್ಯಾಗಾರ
ಮೈಸೂರು: ನವೀನ ಬೋಧನ ಕ್ರಮಗಳು ಮತ್ತು ಅನುಭವದಿಂದ ಕೂಡಿದ ಕಲಿಕೆಯಿಂದ ವಿದ್ಯಾರ್ಥಿಗಳು ಯಾವುದೇ ರೀತಿಯ ಉದ್ಯಮಕ್ಕೆ ಸಿದ್ಧರಾಗುವಂತೆ ಮಾಡುವುದು ಸಾಧ್ಯ ಎಂದು ಎಸ್ಡಿಎಂಐಎಂಡಿ ಸಂಸ್ಥೆಯ ನಿರ್ದೇಶಕ ಡಾ.ಎನ್.ಆರ್. ಪರಶುರಾಮನ್ ಅಭಿಪ್ರಾಯಪಟ್ಟರು.
ಎಸ್ಡಿಎಂಐಎಂಡಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಹಾಗೂ ಸಾಂಸ್ಥಿಕ ನಡವಳಿಕೆ ವಿಷಯಗಳ ಬೋಧನೆಯಲ್ಲಿ ಉಪಯೋಗಿಸಬಹುದಾದ ನವೀನ ಕ್ರಮಗಳು ಕುರಿತ ಎರಡು ದಿನಗಳ ಬೋಧನಾ ಸಿಬ್ಬಂದಿಯ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಸಂಸ್ಥೆಯ ಹಿರಿಯ ಪ್ರಾಧ್ಯಾಪಕ ಡಾ.ನಿಲಂಜನ್ ಸೇನ್ ಗುಪ್ತ ಮತ್ತು ಡಾ.ಮೌಸುಮಿ ಸೇನ್ ಗುಪ್ತ ಮಾತನಾಡಿ, ಮಾನವ ಸಂಪನ್ಮೂಲ ಹಾಗೂ ಸಾಂಸ್ಥಿಕ ನಡವಳಿಕೆ ವಿಷಯಗಳ ಬೋಧನೆಯಲ್ಲಿ ನವೀನ ಕ್ರಮಗಳ ಉಪಯೋಗದಿಂದ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಸಮಗ್ರ ಕಲಿಕೆ ಸಾಧ್ಯ. ಇದಕ್ಕೆ ಅನುಕೂಲವಾಗುವಂತೆ ಉಪನ್ಯಾಸಗಳು, ನಟನಾಭಿನಯದಿಂದ ಕೂಡಿದ ಪ್ರಯೋಗಗಳು, ಪ್ರಕರಣಗಳ ಬಗ್ಗೆ ಚರ್ಚೆಯಿಂದ ಕೂಡಿದ ಪ್ರಾಯೋಗಿಕ ಪ್ರದರ್ಶನ ಮತ್ತು ನಿರ್ದಿಷ್ಟ ಪಾತ್ರಗಳ ಮೂಲಕ ಕಲಿಕೆ - ಇವುಗಳ ಸಂಯೋಗದ ಪರಿವಿಡಿಯನ್ನು ಸಿದ್ಧಗೊಳಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೇಶದಾದ್ಯಂತ ಅನೇಕ ವ್ಯವಹಾರ ನಿರ್ವಹಣ ಸಂಸ್ಥೆಗಳ 28 ಬೋಧನಾ ಸಿಬ್ಬಂದಿ ಭಾಗವಹಿಸಿದ್ದರು. ಸಮಾರೋಪದಲ್ಲಿ ಸಂಸ್ಥೆಯ ಉಪ ನಿರ್ದೇಶಕ ಡಾ.ಎಚ್. ಗಾಯತ್ರಿ ಬೋಧನಾ ಸಿಬ್ಬಂದಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಎಸ್ಡಿಎಂಐಎಂಡಿ ಸಂಸ್ಥೆಯ ಇತರೆ ಶಿಕ್ಷಕ ವರ್ಗ ಹಾಗೂ ಕಾರ್ಯಕ್ರಮದ ಸಂಚಾಲಕ ಡಾ.ಎಂ.ವಿ. ಸುನಿಲ್ ಇದ್ದರು.