ಮತದಾನ ಮಾಡಿ, ಪ್ರಜಾಪ್ರಭುತ್ವ ಉಳಿಸಿ...
ಮೈಸೂರು: ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ವಿದ್ಯಾರ್ಥಿಗಳು ಮ್ಯಾರಾಥಾನ್ ನಡೆಸಿದರು. ವೋಟ್ ಆ್ಯಂಡ್ ಸೇವ್ ಡೆಮಾಕ್ರಸಿ (ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ) ಎಂಬ ಸಂದೇಶದೊಂದಿಗೆ ಗಂಗೋತ್ರಿ ಬಡಾವಣೆಯಿಂದ ಆರಂಭವಾದ ಮ್ಯಾರಾಥಾನ್ಗೆ ಪ್ರಾಂಶುಪಾಲ ಪ್ರೊ.ಶಕೀಬ್ ಉರ್ ರೆಹಮಾನ್ ಚಾಲನೆ ನೀಡಿದರು. ಮಾನಸ ಗಂಗೋತ್ರಿಯ ಸೆನೆಟ್ ಭವನ, ಕ್ರಾಫರ್ಡ್ ಭವನ ರಸ್ತೆ, ಕಾಫಿ ಬೋರ್ಡ್ ರಸ್ತೆ, ಆಯಿಷ್ ಮೂಲಕ ಕಾಲೇಜಿನ ಆವರಣದಲ್ಲಿ ಕೊನೆಗೊಂಡಿತು. ಉಪ ಪ್ರಾಂಶುಪಾಲ ಪಿ. ಶಿವಮೂರ್ತಿ, ಡೀನ್ ಎ.ಎನ್. ಸಂತೋಷ್ಕುಮಾರ್ ಇದ್ದರು.
ಚಾಮರಾಜ ಕ್ಷೇತ್ರದಲ್ಲಿ ಪ್ರತಾಪ್ ಮತಯಾಚನೆ
ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಭಾನುವಾರ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಪ್ರಚಾರ ನಡೆಸಿದರು. ಟಿ.ಕೆ. ಬಡಾವಣೆಯ ಆಂಜನೇಯಸ್ವಾಮಿ ದೇವಸ್ಥಾನದಿಂದ ಬೆಳಗ್ಗೆ ಚುನಾವಣಾ ಪ್ರಚಾರ ಆರಂಭಿಸಿದ ಪ್ರತಾಪ್ ಸಿಂಹ ಅವರು, ಸರಸ್ವತಿಪುರಂ, ಕೆ.ಜಿ. ಕೊಪ್ಪಲಿನ ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚುವ ಮೂಲಕ ಮತಯಾಚಿಸಿದರು. ಬಳಿಕ ವಿನೋಭಾ ರಸ್ತೆ, ದೇವರಾಜ ಮಾರುಕಟ್ಟೆ, ಅಕ್ಕಿಚೌಕ, ಕೆ.ಆರ್. ಆಸ್ಪತ್ರೆ ಸುತ್ತಮುತ್ತ ವ್ಯಾಪಕ ಪ್ರಚಾರ ನಡೆಸಿದರು. ಬಳಿಕ ಅಶೋಕರಸ್ತೆ, ದೊಡ್ಡ ಗಡಿಯಾರ ವೃತ್ತ, ಕಾಳಮ್ಮನಗುಡಿ ರಸ್ತೆ, ಮಂಚೇಗೌಡನಕೊಪ್ಪಲು, ಲಕ್ಷ್ಮೀಕಾಂತನಗರ, ವಿಜಯನಗರದಲ್ಲಿ ಪ್ರಚಾರ ಕೈಗೊಂಡರು.