ಸಂಚಾರ ಶುಭೋದಯ ಶುರು
ಮೈಸೂರು: ಸರಗಳ್ಳತನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಂಚಾರ ಶುಭೋದಯ ಕಾರ್ಯಕ್ರಮವನ್ನು ಮತ್ತೆ ಆರಂಭಿಸಿದ್ದಾರೆ. ಕೆಲ ದಿನಗಳಿಂದ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಗರ ಪೊಲೀಸರು ಭಾನುವಾರದಿಂದ ಸಂಚಾರ ಶುಭೋದಯ ಕಾರ್ಯಕ್ರಮ ಆರಂಭಿಸಿದ್ದಾರೆ. ಬೆಳಗ್ಗೆ 5 ರಿಂದ 7 ಗಂಟೆಯವರೆಗೆ ಪ್ರಮುಖ ಬಡಾವಣೆಗಳು ಮತ್ತು ಜನವಸತಿ ಇಲ್ಲದ ಬಡಾವಣೆಗಳಲ್ಲಿ ಬೈಕ್ ಮೂಲಕ ಸಂಚರಿಸಿ ಜನರಿಗೆ ಅಭಯ ನೀಡುವ ಈ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವ ಮತ್ತು ಮನೆ ಮುಂದೆ ರಂಗೋಲಿ ಹಾಕುವ ಮಹಿಳೆಯರ ಬಳಿಯಿಂದ ಚಿನ್ನದ ಸರ ಅಪಹರಿಸುತ್ತಿದ್ದ ಪ್ರಕರಣಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಪೊಲೀಸರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ನಗರದ ವ್ಯಕ್ತಿ ನಾಪತ್ತೆ
ಮೈಸೂರು: ಚಿನ್ನದ ಕೆಲಸ ಮಾಡಿಕೊಂಡಿದ್ದ ರಘು ಎಂಬ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಇರ್ವಿನ್ ರಸ್ತೆಯ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರಘು ಕಳೆದ ಫೆ.24 ರಂದು ನೆರಮನೆಯವರಿಗೆ ಮನೆಯ ಬೀಗ ಮತ್ತು ಮೊಬೈಲ್ ನೀಡಿ ಹೋದವರು ಇದುವರೆಗೂ ಹಿಂದಿರುಗಿಲ್ಲ ಎಂದು ಅವರ ಪತ್ನಿ ಮಂಜುಳಾ ದೂರು ನೀಡಿದ್ದಾರೆ. 36 ವರ್ಷ, ಎಣ್ಣೆಗೆಂಪು ಬಣ್ಣ, ದುಂಡುಮುಖ, ಸಾಧಾರಾಣ ಮೈಕಟ್ಟು, 5.6 ಅಡಿ ಎತ್ತರ ಇರುವ ರಘು ಕನ್ನಡ, ತೆಲಗು ಮತ್ತು ತಮಿಳು ಮಾತನಾಡುತ್ತಾರೆ. ಇವರ ಸುಳಿವು ದೊರಕಿದರೆ ಕೂಡಲೆ ಪೊಲೀಸ್ ಠಾಣೆ ದೂ. 2418339 ಸಂಪರ್ಕಿಸಬಹುದು.