ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಪದಚ್ಯುತಿ
ಎಚ್.ಡಿ. ಕೋಟೆ: ತಾಲೂಕಿನ ಹಂಪಾಪುರ ಹೋಬಳಿಯ ಮಾದಾಪುರ ಗ್ರಾಪಂ ಸದಸ್ಯರು ಸಭೆ ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಪದಚ್ಯುತಿಗೊಳಿಸುವಂತೆ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ಅಧ್ಯಕ್ಷೆ ನಿರ್ಮಲ ಹಾಗೂ ಉಪಾಧ್ಯಕ್ಷ ಶಿವಣ್ಣ ಅವರು ಇತ್ತೀಚೆಗೆ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ, ಉದಾಸೀನತೆಯಿಂದ ನಡೆದುಕೊಳ್ಳುವುದರಿಂದ ಹಾಗೂ ಇವರ ಅವಧಿಯಲ್ಲಿ ಸಾರ್ವಜನಿಕರ ಕೆಲಸಗಳು ಕುಂಠಿತಗೊಂಡಿರುವುದರಿಂದ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಯಿತು ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ.
ರಾಕೇಶ್ ಸಿದ್ದರಾಮಯ್ಯ ಪಾದಯಾತ್ರೆ
ತಾಂಡವಪುರ: ಜನರಲ್ಲಿ ಜಾತಿ ವಿಷ ಬೀಜ ಬಿತ್ತುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಹೇಳಿದರು. ವರುಣ ಕ್ಷೇತ್ರದ ಹೆಜ್ಜಿಗೆ ಗ್ರಾಮದಲ್ಲಿ ಪಾದಯಾತ್ರೆ ಮೂಲಕ ಮತಯಾಚಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಎಂದೂ ಜಾತಿ ರಾಜಕಾರಣ ಮಾಡಲಿಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಧ್ರುವನಾರಾಯಣ್ ಹಾಗೂ ಮೈಸೂರು ಕ್ಷೇತ್ರದ ಅಭ್ಯರ್ಥಿ ಎಚ್.ವಿಶ್ವನಾಥ್ ಅವರನ್ನು ಗೆಲ್ಲಿಸಿ ತಕ್ಕ ಪಾಠ ಕಲಿಸಬೇಕು ಎಂದರು.
ಗ್ರಾಮೀಣ ಶಾಲೆಗಳಿಗೆ ಐಟಿಸಿ ನೆರವು
ಹುಣಸೂರು: ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಶಾಲೆಗಳಿಗೆ ತರಗತಿ, ಕಾಂಪೌಂಡ್, ಡೆಸ್ಕ್, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಐಟಿಸಿ ಸಂಸ್ಥೆ ಕೋರಿಕೆಯ ಮೇರೆಗೆ ನೀಡುತ್ತಾ ಬಂದಿದೆ ಎಂದು ಐಟಿಸಿ ಸಂಸ್ಥೆಯ ಮುಖ್ಯಸ್ಥ ರಾಜಶೇಖರ್ ಹೇಳಿದರು. ತಾಲೂಕಿನ ಚೆನ್ನಸೋಗೆ ಮತ್ತು ಬೀರನಹಳ್ಳಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಐಟಿಸಿ ಕಂಪನಿಯಿಂದ ಡೆಸ್ಕ್ಗಳನ್ನು ವಿತರಿಸಿ ಮಾತನಾಡಿದ ಅವರು, ಅದೇ ರೀತಿ ಕೆರೆಗಳ ಹೂಳೆತ್ತುವ ಕಾರ್ಯಕ್ರಮವನ್ನು ಕೂಡ ಕಂಪನಿಯಿಂದ ಕೋರಿಕೆಯ ಮೇರೆಗೆ ನೀಡಲಾಗುತ್ತಿದೆ. ಸರ್ಕಾರದ ಜೊತೆ ಸಂಘ ಸಂಸ್ಥೆಗಳು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು. ಐಟಿಸಿ ಕಂಪನಿ ಮೇಲ್ವಿಚಾರಕ ಮೋಹನ್ ಹಾಗೂ ಕಂಪನಿಯ ಅಧಿಕಾರಿಗಳು ಇದ್ದರು.