ದೇಶಾದ್ಯಂತ ನರೇಂದ್ರ ಮೋದಿ ಅಲೆ
ಕೆ.ಆರ್. ನಗರ: ದೇಶದಾದ್ಯಂತ ನರೇಂದ್ರ ಮೋದಿ ಪರವಾದ ಅಲೆ ಇರುವುದರಿಂದ ತಾಲೂಕಿನ ಪ್ರಜ್ಞಾವಂತ ಮತದಾರರು ಪಕ್ಷವನ್ನು ಬೆಂಬಲಿಸಲಿದ್ದು, ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ಸಮನಾಗಿ ಬಿಜೆಪಿ ಅಭ್ಯರ್ಥಿ ಮತ ಗಳಿಸಲಿದ್ದಾರೆ ಎಂದು ತಾಲೂಕು ಬಿಜೆಪಿ ಮುಖಂಡ ಮಿರ್ಲೆ ಶ್ರೀನಿವಾಸಗೌಡ ಹೇಳಿದರು.
ಪಟ್ಟಣದ ಗರುಡಗಂಭ ವೃತ್ತದಲ್ಲಿ ಎಲ್ಇಡಿ ಪ್ರಚಾರದ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ತಾಲೂಕು ಘಟಕದ ವತಿಯಿಂದ ಕ್ಷೇತ್ರದ ಉದ್ದಗಲಕ್ಕೂ ವ್ಯವಸ್ಥಿತವಾಗಿ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿದ್ದು, ಗುಜರಾತ್ ಮಾದರಿಯಲ್ಲಿ ಭಾರತವನ್ನು ಅಭಿವೃದ್ಧಿ ಮಾಡಲು ಬಿಜೆಪಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಶಿವಲಿಂಗಯ್ಯ ಅವರನ್ನು ಜನತೆ ಆಯ್ಕೆ ಮಾಡಿದರೆ ಮೋದಿಯವರಿಗೆ ಶಕ್ತಿ ನೀಡಿದಂತೆ ಆಗುತ್ತದೆ. ಆಯ್ಕೆಯಾದ ನಂತರ ಕಾವೇರಿ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಮತ್ತು ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಆದ್ಯತೆ ನೀಡುವುದರ ಜತೆಗೆ ತಾಲೂಕು ಮಟ್ಟದಲ್ಲಿ ತರಕಾರಿ, ಹಣ್ಣುಗಳ ಸಂರಕ್ಷಣೆಗೆ ಹಾಗೂ ರಫ್ತು ಮಾಡಲು ಚಾಲನೆ ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ನಂಜುಂಡಸ್ವಾಮಿ, ಕಾರ್ಯದರ್ಶಿ ಪ್ರವೀಣ್, ಯುವಮೋರ್ಚಾ ಅಧ್ಯಕ್ಷ ಅನಿಲ್ಕುಮಾರ್, ಮುಖಂಡರಾದ ನಂಜುಂಡ, ಉಮೇಶ್, ಮಹೇಶ್ ಇದ್ದರು.