ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಗರದಲ್ಲಿ ಮೋದಿ ಪ್ರತಾಪ ಇಂದು

Mainashree
Updated On : 8 Apr 2014, 12:04 pm

ಕ.ಪ್ರ.ವಾರ್ತೆ  ಮೈಸೂರು  ಏ. 7
ಲೋಕಸಭಾ ಚುನಾವಣೆ ಅಂಗವಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಏ.8 ರಂದು ಮೈಸೂರಿಗೆ ಆಗಮಿಸಲಿದ್ದು, ದಕ್ಷಿಣ ಕರ್ನಾಟಕದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವರು.
ಅಂದು ಸಂಜೆ 4 ಗಂಟೆಗೆ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೈಸೂರು ವಿವಿ ಫುಟ್ಬಾಲ್ ಮೈದಾನಕ್ಕೆ ಬಂದಿಳಿಯಲಿದ್ದಾರೆ. ಅದರ ಪಕ್ಕದಲ್ಲಿರುವ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆಗೆ ಆಗಮಿಸಿ ಭಾಷಣ ಮಾಡುವರು. ಇವರೊಂದಿಗೆ ರಾಜ್ಯದ ನಾಯಕರು ಹಾಗೂ ಮಾಜಿ ಸಚಿವ ಆರ್. ಅಶೋಕ, ವಿ.ಸೋಮಣ್ಣ, ಸಿ.ಟಿ. ರವಿ ಭಾಗವಹಿಸುವರು.
ಸಂಚಾರಕ್ಕೆ ಬದಲಿ ಮಾರ್ಗಗಳು: ಏ.8 ರಂದು ನರೇಂದ್ರ ಮೋದಿ ಹಾಗೂ ಏ.9 ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಬದಲಿ ಮಾರ್ಗ ಸೂಚಿಸಿದ್ದಾರೆ. ಗಣ್ಯರು ಸಂಚರಿಸುವ ಮಾರ್ಗದಲ್ಲಿ ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಬದಲಿ ಮಾರ್ಗ, ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ಗಣ್ಯರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಮಯಕ್ಕೆ ಮತ್ತು ಸಮಾವೇಶ ಮುಗಿದ ನಂತರ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೊರಡುವ ಸಮಯಕ್ಕೆ ಒಂದು ಗಂಟೆ ಮುಂಚಿತವಾಗಿ ನಂಜನಗೂಡು ಕಡೆಯಿಂದ ಮೈಸೂರು ಕಡೆಗೆ ಬರುವ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸಬೇಕಾಗುತ್ತದೆ.
ನಂಜನಗೂಡು ಪಟ್ಟಣದಿಂದ ಮೈಸೂರು ನಗರದೆಡೆಗೆ ಬರುವ ಎಲ್ಲಾ ವಾಹನಗಳು ನಂಜನಗೂಡು ಕಬಿನಿ ನದಿ ಸೇತುವೆ ಬಳಿ ಡಿವಿಯೇಷನ್ ಪಡೆದು ಬಸವನಪುರ- ಕೆಂಪಿಸಿದ್ದನಹುಂಡಿ- ಹದಿನಾರು- ಸುತ್ತೂರು- ವರುಣ ಮೂಲಕ ಟಿ.ನರಸೀಪುರ ಮುಖ್ಯ ರಸ್ತೆಯನ್ನು ಸೇರಿ ಎಡ ತಿರುವು ಪಡೆದು ಆ ರಸ್ತೆ ಮುಖಾಂತರ ಮೈಸೂರು ರಸ್ತೆಗೆ ಸೇರಬೇಕು. ನಂಜನಗೂಡು ರಸ್ತೆ ಕಡಕೊಳ ಗ್ರಾಮದಿಂದ ಸಿಂಧುವಳ್ಳಿ- ತಳೂರು- ಉದ್ಬೂರು ಮೂಲಕ ಮಾನಂದವಾಡಿ ರಸ್ತೆ ಸೇರಿ ಬಲ ತಿರುವು ಪಡೆದು ಮೈಸೂರು ನಗರ ಸೇರಬೇಕು.
ಬಸ್ಸುಗಳು, ಮ್ಯಾಕ್ಸಿಕ್ಯಾಬ್‌ಗಳಿಗೆ: ಹುಣಸೂರು ರಸ್ತೆ ಮೂಲಕ ನಗರಕ್ಕೆ ಆಗಮಿಸುವವರು ಹಿನಕಲ್ ವರ್ತುಲ ರಸ್ತೆ ಬಳಿ ಬಲಕ್ಕೆ ತಿರುವು ಪಡೆದು ರಿಂಗ್ ರಸ್ತೆ, ಬೋಗಾದಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ವಿಲೇಜ್ ಹಾಸ್ಟೆಲ್, ಮಾನಸಗಂಗೋತ್ರಿ ಕ್ರಿಕೆಟ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಅದೇ ರೀತಿ ಎಚ್.ಡಿ. ಕೋಟೆ ರಸ್ತೆಯ ಮೂಲಕ ನಗರಕ್ಕೆ ಆಗಮಿಸುವವರು ಶ್ರೀನಿವಾಸ ಸರ್ಕಲ್ ಬಳಿ ಎಡ ತಿರುವು ಪಡೆದು ಜೆಎಲ್‌ಬಿ ರಸ್ತೆ- ವೇದಾಂತ ಹೆಮ್ಮಿಗೆ ವೃತ್ತ- ಅಶೋಕ ವೃತ್ತ- ಅಂಡರ್ ಬ್ರಿಡ್ಜ್, ಕೆ.ಆರ್. ಬುಲ್ ವಾರ್ಡ್ ರಸ್ತೆ ಮುಖಾಂತರ ಸಂಚರಿಸಿ ಹೊಟೇಲ್ ಏರ್‌ಲೈನ್ಸ್ ಮುಂಭಾಗದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಬೇಕು.
ನಂಜನಗೂಡು ರಸ್ತೆ ಮುಖಾಂತರ ನಗರಕ್ಕೆ ಆಗಮಿಸುವವರು ಊಟಿ ರಸ್ತೆಯ ರಿಂಗ್ ರಸ್ತೆ ಜಂಕ್ಷನ್ ಬಳಿ ಎಡತಿರುವು ಪಡೆದು ಎಚ್.ಡಿ.ಕೋಟೆ ವರ್ತುಲ ರಸ್ತೆ ಜಂಕ್ಷನ್ ಬಳಿ ಬಲ ತಿರುವು ಪಡೆದು ಮಾನಂದವಾಡಿ ರಸ್ತೆ, ಶ್ರೀನಿವಾಸ ವೃತ್ತ- ವೇದಾಂತ ಹೆಮ್ಮಿಗೆ ವೃತ್ತ- ಅಶೋಕ ವೃತ್ತ- ಅಂಡರ್ ಬ್ರಿಡ್ಜ್- ಕೆ.ಆರ್. ಬುಲ್ ವಾರ್ಡ್ ರಸ್ತೆ ಮುಖಾಂತರ ಬಂದು ಹೊಟೇಲ್ ಏರ್‌ಲೈನ್ಸ್ ರಸ್ತೆ ಮುಂಭಾಗ ವಾಹನ ನಿಲ್ಲಿಸಬೇಕು.
ಟಿ.ನರಸೀಪುರ ರಸ್ತೆ ಮುಖಾಂತರ ನಗರಕ್ಕೆ ಆಗಮಿಸುವವರು ಟೆರಿಷಿಯನ್ ಕಾಲೇಜು ವೃತ್ತಕ್ಕೆ ಹೋಗಿ ಮುಂದೆ ಸಾಗಬೇಕು. ಅಲ್ಲಿಂದ ಮಲೈ ಮಹದೇಶ್ವರ ವೃತ್ತ- ನಜರ್‌ಬಾದ್ ಠಾಣೆ ವೃತ್ತದ ಬಳಿ ಎಡ ತಿರುವು ಪಡೆದು ಲೋಕರಂಜನ್ ರಸ್ತೆ ಮೂಲಕ ಹಾರ್ಡಿಂಜ್ ವೃತ್ತ- ಎ.ವಿ. ರಸ್ತೆ- ಡಿ. ದೇವರಾಜ ಅರಸು ರಸ್ತೆ- ಜೆಎಲ್‌ಬಿ ಜಂಕ್ಷನ್‌ಗೆ ಬಂದು ಮಹಾರಾಜ ಪಿಯು ಕಾಲೇಜು ಆವರಣದಲ್ಲಿ ವಾಹನ ನಿಲ್ಲಿಸಬೇಕು. ಬೆಂಗಳೂರಿನಿಂದ ಬರುವವರು ಹಳೇ ಟೋಲ್‌ಗೇಟ್ ಬಳಿ ನಂದಿಬಸಪ್ಪ ಗೋರಿ ಮುಂಭಾಗದ ರಸ್ತೆ ಮೂಲಕ ಬನ್ನಿಮಂಟಪದ ರಸ್ತೆ, ಮಿಲೇನಿಯಂ ವೃತ್ತ- ಬಲತಿರುವು- ನಲ್ಸನ್ ಮಂಡೇಲಾ ರಸ್ತೆ- ಹೈವೇ ವೃತ್ತ- ಬಂಬೂಬಜಾರ್- ಹಳೆ ಆರ್‌ಎಂಸಿ ವೃತ್ತ- ದಿವಾನ್ಸ್ ಶೇಷಾದ್ರಿ ಅಯ್ಯರ್ ರಸ್ತೆ- ಬಲತಿರುವು- ಮೆಟ್ರೋಪೋಲ್ ವೃತ್ತ- ಆರ್ಚ್‌ಗೇಟ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ವಾಹನ ನಿಲ್ಲಿಸಬೇಕು.
ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ: ನಗರದ ದಕ್ಷಿಣ ಭಾಗದ ನಂಜನಗೂಡು ರಸ್ತೆ, ಮಾನಂದವಾಡಿ ರಸ್ತೆ, ಆರ್‌ಟಿಒ ವೃತ್ತ ಕಡೆಯಿಂದ, ಜಯನಗರ ಕಡೆಯಿಂದ ಬರುವ ವಾಹನಗಳು ಜಯನಗರ ಅಂಡರ್‌ಬ್ರಿಡ್ಜ್ ಕಡೆಯಿಂದ ಕೆ.ಆರ್. ಬುಲ್‌ವಾರ್ಡ್ ರಸ್ತೆ ಮೂಲಕ ಅಥವಾ ಜೆಎಲ್‌ಬಿ ರಸ್ತೆ ಕಡೆಯಿಂದ ಬರುವವರು ಆರ್‌ಟಿಒ ಸರ್ಕಲ್ ಬಳಿ ಎಡ ತಿರುವು ಪಡೆದು ಗೀತಾ ರಸ್ತೆ, ಕೆ.ಆರ್. ಬುಲ್‌ವಾರ್ಡ್ ರಸ್ತೆಯ ಜಿಪಂ ಕಚೇರಿಯಿಂದ ಏಕಲವ್ಯ ವೃತ್ತದವರೆಗೆ ವಾಹನ ನಿಲ್ಲಿಸಬೇಕು.
ನಗರದ ಉತ್ತರ ಭಾಗದ ಮಂಡಿ ಮೊಹಲ್ಲಾ, ಎನ್.ಆರ್. ಮೊಹಲ್ಲಾ, ಲಷ್ಕರ್ ಮೊಹಲ್ಲಾ, ದೇವರಾಜ ಮೊಹಲ್ಲಾ, ಇರ್ವಿನ್ ರಸ್ತೆ, ರೇಲ್ವೆ ನಿಲ್ದಾಣ ಕಡೆಯಿಂದ ಬರುವ ವಾಹನಗಳು ಜೆಎಲ್‌ಬಿ ರಸ್ತೆ- ಡಿ. ದೇವರಾಜ ಅರಸು ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಮಹಾರಾಜ ಪಿಯು ಕಾಲೇಜು ಮೈದಾನದಲ್ಲಿ ವಾಹನ ನಿಲ್ಲಿಸಬೇಕು. ಪೂರ್ವ ಭಾಗದ ಸಿದ್ದಾರ್ಥ ಬಡಾವಣೆ, ನಜರ್‌ಬಾದ್, ಕೆ.ಆರ್. ಮೊಹಲ್ಲಾದಿಂದ ಬರುವ ವಾಹನಗಳು ರಾಮಸ್ವಾಮಿ ವೃತ್ತ ಬಲ ತಿರುವು ಪಡೆದು ಜೆಎಲ್‌ಬಿ ರಸ್ತೆ, ವಿಸಿ ಮನೆ ಬಳಿ ಎಡ ತಿರುವ ಪಡೆದು ಮಹಾರಾಜ ಕಾಲೇಜು, ಯುವರಾಜ ಕಾಲೇಜು ಆವರಣದಲ್ಲಿ ವಾಹನ ನಿಲ್ಲಿಸಬೇಕು. ಪಶ್ಚಿಮ ಭಾಗದ ಕುವೆಂಪುನಗರ, ಸರಸ್ವತಿಪುರಂ, ಹುಣಸೂರು ರಸ್ತೆ, ಬೋಗಾದಿ ರಸ್ತೆ, ವಿವಿ ಮೊಹಲ್ಲಾ ಕಡೆಯಿಂದ ಬರುವ ವಾಹನಗಳು ಕಾಂತರಾಜ ಅರಸ್ ರಸ್ತೆ- ಶ್ಯಾಮ್ ಸ್ಟುಡಿಯೋ ಬಳಿ ಎಡ ತಿರುವು ಪಡೆದು ಸರಸ್ವತಿಪುರಂನ ಮುಖ್ಯ ರಸ್ತೆಯ ಈಜುಕೊಳದ ಬಳಿ ಎಡ ತಿರುವು ಪಡೆದು ಕುಕ್ಕರಹಳ್ಳಿ ರಸ್ತೆಯಲ್ಲಿ ವಾಹನ ನಿಲ್ಲಿಸಬೇಕು.
ಈ ಮೇಲಿನ ಜಾಗಗಳು ಭರ್ತಿಯಾದಲ್ಲಿ ಮೈಸೂರು ವಿವಿ ಓವಲ್ ಮೈದಾನ, ಕೆ.ಆರ್. ಬುಲ್‌ವಾರ್ಡ್ ರಸ್ತೆ, ದಿವಾನ್ಸ್ ರಸ್ತೆ, ಶೇಷಾದ್ರಿ ಅಯ್ಯರ್ ರಸ್ತೆ, ಜೆ.ಕೆ. ಮೈದಾನ, ದಸರಾ ವಸ್ತುಪ್ರದರ್ಶನ ಮೈದಾನ ಮತ್ತು ಅಗ್ನಿಶಾಮಕ ದಳದ ಕವಾಯಿತು ಮೈದಾನದಲ್ಲಿ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement