ಪಾರಂಪರಿಕ ತಾಣಗಳ ಅಭಿವೃದ್ಧಿಗೆ ಆದ್ಯತೆ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಹೊರತಂದಿರುವ ಚುನಾವಣಾ ಪ್ರಣಾಳಿಕೆಯನ್ನು ಕಂದಾಯ ಸಚಿವ ವಿ.ಶ್ರೀನಿವಾಸಪ್ರಸಾದ್ ಸೋಮವಾರ ಬಿಡುಗಡೆಗೊಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಬರಿ ಮಾತಿನಿಂದ ಭರವಸೆ ನೀಡುವ ಬದಲು ಬರವಣಿಗೆ ರೂಪದಲ್ಲಿ ತಿಳಿಸುತ್ತಿರುವುದು ಒಳ್ಳೆಯದು. ಇದರಿಂದ ಅಭ್ಯರ್ಥಿಗಿರುವ ಬದ್ಧತೆ ತಿಳಿಯುತ್ತದೆ. ಮೈಸೂರು- ಕೊಡಗು ಜಿಲ್ಲೆಗಳಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿಯ ಮುನ್ನೋಟಗಳು ಇದರಲ್ಲಿವೆ. ಆದ್ದರಿಂದ ಕ್ಷೇತ್ರದ ಮತದಾರರು ಇವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಅಭ್ಯರ್ಥಿ ಎಚ್.ವಿಶ್ವನಾಥ್ ಮಾತನಾಡಿ, ಮೈಸೂರಿನಲ್ಲಿ ವಿಮಾನ ಹಾರಾಟಕ್ಕೆ ಮತ್ತೆ ಚಾಲನೆ ನೀಡಲಾಯಿತು. ಮೈಸೂರು- ಕೊಡಗು ನಡುವೆ ರೇಲ್ವೆ ಸಂಪರ್ಕ ಕಲ್ಪಿಸಲು ಪ್ರಯತ್ನಿಸಿದ್ದೇನೆ ಎಂದರು. ಮಾಜಿ ಸಚಿವೆ ರಾಣಿ ಸತೀಶ್, ಶಾಸಕರಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ನಗರಾಧ್ಯಕ್ಷ ಸಿ. ದಾಸೇಗೌಡ, ಕೆ.ಆರ್. ಮೋಹನಕುಮಾರ್, ಎಚ್.ಎ. ವೆಂಕಟೇಶ್ ಇದ್ದರು.