ವಿಶ್ವನಾಥ್ ವಿರುದ್ಧ ವಕೀಲರ ಆಕ್ರೋಶ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಎಚ್.ವಿಶ್ವನಾಥ್ ಸೋಮವಾರ ವಕೀಲರ ಆಕ್ರೋಶಕ್ಕೆ ತುತ್ತಾಗಬೇಕಾಯಿತು. ಅವರು ಮತ ಕೇಳುವ ಸಲುವಾಗಿ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಬಳಿ ಬಂದರು. ಆದರೆ ಒಳಬಿಡಲು ನಿರಾಕರಿಸಿದ ವಕೀಲರು, ನೀವು ವಕೀಲರ ಬಗ್ಗೆ, ವಕೀಲರ ಸಂಘಕ್ಕೆ ಜಾಗ ನೀಡಿಕೆ ಬಗ್ಗೆ ಈ ಹಿಂದೆ ಅವಹೇಳನಕಾರಿಯಾಗಿ ಮಾತನಾಡಿದ್ದೀರಿ ಎಂದು ಆಕ್ಷೇಪ ತೆಗೆದರು. ಇದರಿಂದ ವಿಶ್ವನಾಥ್ ಬಂದ ದಾರಿಕೆ ಸುಂಕವಿಲ್ಲ ಎಂಬಂತೆ ವಾಪಸ್ ಆದರು. ಬೈಲುಕುಪ್ಪೆಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಆಗಮಿಸಿದಾಗ, ಎಚ್.ವಿಶ್ವನಾಥ್ ಅವರನ್ನು ಗ್ರಾಪಂ ಅಧ್ಯಕ್ಷ ರವಿಮಾನು ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದ್ದರು.
ಪ್ರಚಾರಕ್ಕೆ ಅವಕಾಶ ನೀಡದ ಗ್ರಾಮಸ್ಥರು
ಹುಣಸೂರು: ಚುನಾವಣಾ ಪ್ರಚಾರಕ್ಕಾಗಮಿಸಿದ ಹಾಲಿ ಸಂಸದ ಎಚ್.ವಿಶ್ವನಾಥ್ ಹಾಗೂ ಶಾಸಕರ ವಿರುದ್ಧ ಆಕ್ರೋಶಗೊಂಡ ಗ್ರಾಮಸ್ಥರು, ಪ್ರಚಾರ ಸಭೆ ನಡೆಸಲು ಅವಕಾಶ ನೀಡಲೇ ಇಲ್ಲ. ಪರಿಣಾಮ ಬಂದ ದಾರಿಗೆ ಸುಂಕವಿಲ್ಲದಂತೆ ಸಂಸದರು ವಾಪಸಾದ ಘಟನೆ ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಭಾನುವಾರ ಸಂಜೆ ಜರುಗಿದೆ. ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಹಾಗೂ ಶಾಸಕ ಎಚ್.ಪಿ. ಮಂಜುನಾಥ್ ಸಂಜೆ 7ರ ಸುಮಾರಿಗೆ ಗ್ರಾಮಕ್ಕೆ ಬಂದಾಗ, ಗ್ರಾಮದವರಿಂದ ಪ್ರತಿಭಟನೆ ಎದುರಿಸಬೇಕಾಯಿತು. ಕಳೆದ ಐದು ವರ್ಷದಿಂದ ಈ ಗ್ರಾಮಕ್ಕೆ ಸಂಸದರು ಬಂದಿಲ್ಲ. ನಮ್ಮ ಕಷ್ಟ ಸುಖ ಏನೆಂದು ವಿಚಾರಿಸಿಲ್ಲ. ಈಗ ಬಂದು ವೋಟ್ ಕೇಳ್ತೀರಾ ಎಂದು ಯುವಕರ ತಂಡ ಸಂಸದರನ್ನು ಪ್ರಶ್ನಿಸಿತು. ಇನ್ನು ಮುಂದೆ ಹೀಗಾಗದಂತೆ ನಡೆದುಕೊಳ್ಳುವುದಾಗಿ ಅಭ್ಯರ್ಥಿ ವಿಶ್ವನಾಥ್ ಸಮಜಾಯಿಷಿ ನೀಡಿದರೂ ಒಪ್ಪದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಸಭೆ ನಡೆಯಬಾರದೆಂದು ಹಠ ಹಿಡಿದರು. ಕೊನೆಗೆ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗಿದರು.