ಸಿಪಿಐ ಎಂಎಲ್ ಅಭ್ಯರ್ಥಿ ಬೆಂಬಲಿಸಿ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಸಿಪಿಐ ಎಂಎಲ್ ಪಕ್ಷದಿಂದ ಸ್ಪರ್ಧಿಸಿರುವ ಡಿ.ಎಸ್. ನಿರ್ವಾಣಪ್ಪ, ಚಾಮರಾಜನಗರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ ಕಂದೇಗಾಲ ಅವರನ್ನು ಬೆಂಬಲಿಸುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿ ಇ.ರುದ್ರಯ್ಯ ಮನವಿ ಮಾಡಿದ್ದಾರೆ.
ಹತ್ತು ವರ್ಷ ಈ ದೇಶವಾಳಿದ ಕಾಂಗ್ರೆಸ್ ಕಾರ್ಪೊರೇಟ್ ಪರ ಕೆಲಸ ಮಾಡಿದೆ. ಶ್ರೀಮಂತರು ಶ್ರೀಮಂತರಾಗಿ, ಬಡವರು ಬಡವರಾಗಿಯೇ ಇದ್ದಾರೆ. ಇವರಿಬ್ಬರ ನಡುವಿನ ಅಂತರ ಮಾತ್ರ ಕಡಿಮೆಯಾಗುತ್ತಿಲ್ಲ. ಟಾಟಾ ಬಿರ್ಲಾ, ಅಂಬಾನಿಯವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ದಿನಕ್ಕೆ ಒಬ್ಬ ಜನಸಾಮಾನ್ಯ ಆದಾಯ 20 ಇದ್ದರೆ, ಅಂಬಾನಿ, ಟಾಟಾ ಬಿರ್ಲಾರ ಆದಾಯ 250 ಕೋಟಿ ಇದೆ. ಇಂತವರಿಗೆ ಮತ ಹಾಕಬಾರದು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ನಾಯಕರು 2004 ರಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದು ಮತ ಕೇಳಿದರು. ಈಗ ಭಾರತ ಉಳಿಸಿ ಎಂದು ಕೇಳುತ್ತಿದ್ದಾರೆ. ಭಾರತ ಪ್ರಕಾಶಿಸಿದ ಮೇಲೆ ಉಳಿಸೋದು ಯಾಕೆ ಎಂದರು.
ಮೈಸೂರು- ಕೊಡಗು ಅಭ್ಯರ್ಥಿ ಡಿ.ಎಸ್. ನಿರ್ವಾಣಪ್ಪ, ಚಾಮರಾಜನಗರ ಅಭ್ಯರ್ಥಿ ಶ್ರೀನಿವಾಸ ಕಂದೇಗಾಲ, ಮುಖಂಡರಾದ ರಾಜಶೇಖರ್, ರಂಗಸ್ವಾಮಿ ಇದ್ದರು.