ಉದ್ದಿನ ಕಳಪೆ ಬಿತ್ತನೆ ಬೀಜ ಪತ್ತೆ
ಕ.ಪ್ರ.ವಾರ್ತೆ , ಮೈಸೂರು , ಏ. 21
ಟಿ.ನರಸೀಪುರ ತಾಲೂಕು ಮೂಗೂರು ರೈತ ಸಂಪರ್ಕ ಕೇಂದ್ರದಿಂದ ವಿತರಿಸಿರುವ ಉದ್ದಿನ ಬಿತ್ತನೆ ಬೀಜ ಕಳಪೆಯಾಗಿರುವುದು ಪತ್ತೆಯಾಗಿದೆ. ಟಿ.ನರಸೀಪುರ ತಾಲೂಕು ಮಾಡ್ರಹಳ್ಳಿಯ ಎಂ.ಕೆ. ಕೈಲಾಸಮೂರ್ತಿ ಅವರು ಈ ಸಂಬಂಧ ಸೋಮವಾರ ಮೈಸೂರು ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಅವರಿಗೆ ದೂರು ನೀಡಿದ್ದಾರೆ.
ಏ.19 ರಂದು ಮೂಗೂರು ರೈತ ಸಂಪರ್ಕ ಕೇಂದ್ರದಿಂದ 30 ಕೆಜಿ ಉದ್ದಿನ ಬಿತ್ತನೆ ಬೀಜವನ್ನು 2,700 ನೀಡಿ ಖರೀದಿಸಿದ್ದೆ. ಆದರೆ ಬಿತ್ತನೆ ಮಾಡಲು ಚೀಲ ತೆರೆದಾಗ ಕಳಪೆಯಾಗಿರುವುದು ಕಂಡುಬಂದಿದೆ. ಈ ಬಿತ್ತನೆ ಬೀಜವನ್ನು ವಿ-ಕೇರ್ ಸೀಡ್ಸ್ ಪ್ರೈ. ಸಂಸ್ಥೆಯು ಉತ್ಪಾದಿಸಿದ್ದು, ಕರ್ನಾಟಕ ರಾಜ್ಯ ಬೀಜ ನಿಗಮದ ಮೂಲಕ ಮಾರಾಟ ಮಾಡುತ್ತಿದೆ ಎಂದಿದ್ದಾರೆ.
ಅವರ ಪ್ರಕಾರ, ಕಾಳಿನ ತೂಕ ಮತ್ತು ಗಾತ್ರದಲ್ಲಿ ವ್ಯತ್ಯಾಸ, ಉದ್ದಿನ ಬೀಜದ ಜೊತೆ ಹೆಸರು ಕಾಳು ಮಿಶ್ರಿತವಾಗಿರುವುದು, ಕೆಲವು ಕಾಳುಗಳು ಕೊಳೆತು ಬೂಸ್ಟ್ ಬಂದಿರುವುದು, ಒಂದೇ ಬಣ್ಣದ ಕಾಳುಗಳಿಲ್ಲದೇ ಇರುವುದು, ಮೇಲ್ನೋಟಕ್ಕೆ ಉತ್ಪಾದಿಸಿ ಹಲವು ವರ್ಷಗಳಾಗಿರುವುದು ಕಂಡುಬಂದಿದೆ.
ತಕ್ಷಣ ಕರ್ನಾಟಕ ರಾಜ್ಯ ಬೀಜ ನಿಗಮದ ಸ್ಥಳೀಯ ವ್ಯವಸ್ಥಾಪಕ ನಾಗರಾಜು ಅವರನ್ನು ಸಂಪರ್ಕಿಸಿ ಹಾಗೂ ಸ್ಥಳಕ್ಕೆ ಕರೆಸಿದ ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಅವರು, ಉದ್ದಿನ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಂದ ವಾಪಸ್ ಪಡೆಯಬೇಕು ಎಂದು ಸೂಚಿಸಿದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಂದ ಸ್ಥಳ ಪರಿಶೀಲನೆ ಮಾಡಿಸಿ, ವರದಿ ಪಡೆಯಲಾಗುವುದು. ನಂತರ ರೈತರಿಗೆ ಪರಿಹಾರ ಸೇರಿದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೈಲಾಸಮೂರ್ತಿ ಅವರು ದೂರಿನ ಪ್ರತಿಯನ್ನು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರು ಹಾಗೂ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಕಳುಹಿಸಿಕೊಟ್ಟಿದ್ದಾರೆ.