ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಶಾಸಕರ ಸಂಬಂಧಿಕರಿಂದ ಸೆಸ್ಕ್ ವಿರುದ್ಧ ಧರಣಿ

Vishwanath S
Updated On : 22 Apr 2014, 12:59 pm

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಏ. 21
ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅವರ ಸಹೋದರ ಮತ್ತು ತಂದೆಯೇ ಸಾಲಿಗ್ರಾಮದ ಸೆಸ್ಕ್ ಕಚೇರಿಯ ಮುಂದೆ ಸಾರ್ವಜನಿಕರೊಡನೆ ಪ್ರತಿಭಟನೆ ಮಾಡಿರುವುದು ತಾಲೂಕಿನಲ್ಲಿ ಆಡಳಿತ ಕುಸಿದಿರುವುದನ್ನು ತೋರಿಸುತ್ತಿದ್ದು, ಇದಕ್ಕೆ ಶಾಸಕ ಸಾ.ರಾ. ಮಹೇಶ್ ಉತ್ತರಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಜಿ.ಆರ್. ರಾಮೇಗೌಡ ಆಗ್ರಹಿಸಿದರು.
ಪರೋಕ್ಷವಾಗಿ ಅವರು ಶಾಸಕರ ಕಾರ್ಯವೈಖರಿ ವಿರುದ್ಧ ಪ್ರತಿಭಟಿಸಿದ್ದು, ತಾಲೂಕಿನಲ್ಲಿ ನಡೆಯುತ್ತಿರುವ ಹಲವಾರು ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಅವುಗಳ ಬಗ್ಗೆ ಧ್ವನಿಯೆತ್ತದ ಶಾಸಕರ ಸಹೋದರ ಮತ್ತು ತಂದೆ ಈಗ ಪ್ರತಿಭಟನೆ ನಡೆಸುತ್ತಿರುವ ಮರ್ಮವೇನು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕೇವಲ ಪುಕ್ಕಟೆ ಪ್ರಚಾರಕ್ಕೆ ಇಂತಹ ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಎಂದ ಅವರು, ರೈತ ಪರವಾದ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಸಾರ್ವಜನಿಕರನ್ನು ದಾರಿ ತಪ್ಪಿಸಿ, ತಮ್ಮ ಸ್ವಾರ್ಥ ಸಾಧನೆಗೆ ನಡೆಸುವ ಇಂತಹ ಡೋಂಗಿ ಹೋರಾಟವನ್ನು ತಾಲೂಕು ಕಾಂಗ್ರೆಸ್ ಖಂಡಿಸುತ್ತದೆಯಲ್ಲದೆ, ಇದರಿಂದ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾಗಿ ದುಡಿಯುತ್ತಿಲ್ಲ ಎಂಬುದು ತಿಳಿಯುತ್ತದೆ ಎಂದು ತಿಳಿಸಿದರು.
ಶಾಸಕರಿಗೆ ತಿಳಿದಿರಲಿಲ್ಲವೆ?: ಪ್ರತಿಭಟನೆ ವೇಳೆ ಶಾಸಕರ ಸಹೋದರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಒಂದು ರು. ಗೆ ಕೆಜಿ ಅಕ್ಕಿ ನೀಡಿ ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿದ್ದು, ಅನ್ನ ತಿನ್ನುವುದರಿಂದ ಸಕ್ಕರೆ ರೋಗ, ಬಿಪಿ ಬರುತ್ತಿದೆ ಎಂದು ಹೇಳಿದ್ದಾರೆ. ಆದರೆ ಕಳೆದ ಚುನಾವಣೆ ವೇಳೆ ಶಾಸಕರೇ ಮೂರು ತಿಂಗಳ ಕಾಲ ರಾಜಕೀಯ ಸ್ವಾರ್ಥಕ್ಕಾಗಿ ಅಕ್ಕಿ ನೀಡಿದರಲ್ಲ, ಆಗ ಈ ವಿಚಾರ ತಿಳಿದಿರಲಿಲ್ಲವೆ ಎಂದು ಅವರು ಟೀಕಿಸಿದರು.
ಸರ್ಕಾರದ ಅನ್ನಭಾಗ್ಯ ಯೋಜನೆಯಿಂದ ರಾಜ್ಯದ ಕೋಟ್ಯಂತರ ನಾಗರಿಕರಿಗೆ ಅನುಕೂಲವಾಗಿದ್ದು, ಈ ಬಗ್ಗೆ ಹಗುರವಾಗಿ ಮಾತನಾಡಿರುವುದು ಬಿಪಿಎಲ್ ಪಡಿತರದಾರರಿಗೆ ಮಾಡಿದ ಅಪಮಾನವಾಗಿದೆ. ನಾನು ಮತ್ತೆ ಶಾಸಕನಾಗಿ ಆಯ್ಕೆಯಾದರೆ ಐದು ವರ್ಷ ಉಚಿತವಾಗಿ ಅಕ್ಕಿ ನೀಡುತ್ತೇನೆ ಎಂಬ ಭರವಸೆ ನೀಡಿ ಗೆದ್ದ ನಂತರ ಅದನ್ನೇ ಮರೆತಿರುವ ಶಾಸಕರಿಗೆ ಅವರ ಸಹೋದರ ಜ್ಞಾಪಿಸಲಿ ಎಂದು ಕಿವಿಮಾತು ನೀಡಿದರು. ಜಿಪಂ ಮಾಜಿ ಸದಸ್ಯ ಜಯರಾಮೇಗೌಡ, ಪುರಸಭಾ ಸದಸ್ಯ ಸುಬ್ರಹ್ಮಣ್ಯ, ಮಾಜಿ ಸದಸ್ಯ ಅಸ್ಲಾಂ, ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶೇಖರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement