ಶೋಷಿತರಿಂದ ವ್ಯಕ್ತಿ ಪೂಜೆ ದೊಡ್ಡ ದುರಂತ
ಕ.ಪ್ರ.ವಾರ್ತೆ , ಮೈಸೂರು , ಏ. 21
ಇಂದು ಶೋಷಿತರು ಸಹ ವ್ಯಕ್ತಿ ಪೂಜೆಗೆ ಮುಂದಾಗಿರುವುದು ಬಹುದೊಡ್ಡ ದುರಂತ ಎಂದು ರಾಜ್ಯ ಹೈಕೋರ್ಟ್ ನ್ಯಾ.ಮೋಹನ್‌ಕುಮಾರ್ ವಿಷಾದಿಸಿದರು.
ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ವೇದಿಕೆಯು ನೂತನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಹಾಗೂ ಭೀಮಕಥಾ ಕೀರ್ತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಪೂಜನೀಯರಲ್ಲ, ಅವರು ಅನುಕರಣೀಯರು. ಆದರೆ ಇಂದು ಅವರನ್ನು ಪೂಜಿಸುವ ಕೆಲಸ ಹೆಚ್ಚಾಗಿ ನಡೆದಿದೆ. ಬುದ್ಧ, ಅಂಬೇಡ್ಕರ್, ನಾಯಕರು ಹಾಗೂ ರಾಜಕಾರಣಿಗಳ ವ್ಯಕ್ತಿ ಪೂಜೆಗೆ ದಲಿತರು ಮುಂದಾಗಿದ್ದಾರೆ. ಶೋಷಿತರು ಸಹ ವ್ಯಕ್ತಿಯತ್ತ ತೊಡಗಿರುವುದು ಬಹುದೊಡ್ಡ ದುರಂತದ ಸಂಗತಿ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ವ್ಯಕ್ತಿ ಪೂಜೆಯಿಂದಾಗುವ ಅನಾಹುತಗಳನ್ನು ತಮ್ಮ ಬರಹದಲ್ಲಿ ತಿಳಿಸಿದ್ದಾರೆ. ನಾಯಕರೆನಿಸಿಕೊಂಡಿದ್ದ ಗಾಂಧಿ, ರಾನಡೆ ಹಾಗೂ ಜಿನ್ನಾ ಅವರ ನಾಯಕತ್ವದಿಂದ ಆಗುವ ಅನಾಹುತಗಳನ್ನು ಕುರಿತು ಬರೆದಿದ್ದಾರೆ. ಇಂತಹ ಬರಹಗಳನ್ನು ಯುವಜನತೆ ಓದಬೇಕು. ಅದನ್ನು ಬಿಟ್ಟು ಬಾಬಾ ಸಾಹೇಬರ ಆಲೋಚನೆಗೆ ವಿರುದ್ಧ ದಿಕ್ಕಿನಲ್ಲಿ ನಡೆಯಬಾರದು ಎಂದು ತಿಳಿಸಿದರು. ಮಹಾರಾಷ್ಟ್ರ ಸರ್ಕಾರವು ಅಂಬೇಡ್ಕರ್ ಅವರ 21 ಸಂಪುಟಗಳನ್ನು ಪ್ರಕಟಿಸಿದೆ. ಪ್ರತಿಯೊಂದು ಸಂಪುಟವನ್ನು ಓದಲೇಬೇಕು. ಅವರ ಬರಹಗಳು ಸಮಗ್ರ ಚಳವಳಿಯ ಪ್ರತಿರೂಪ. ಅವರ ಮೂರನೇ ಸಂಪುಟದಲ್ಲಿ ಬುದ್ಧನ ವಿಚಾರಗಳನ್ನು ಕದ್ದು ಭಗವದ್ಗೀತೆಯನ್ನು ರಚಿಸಿಲಾಗಿದ್ದು, ಬಹಿರಂಗಪಡಿಸಿದ್ದಾರೆ ಎಂದು ತಿಳಿಸಿದ ಅವರು, ಇಂತಹ ವಿಚಾರಗಳನ್ನು ಸಂಶೋಧನಾ ವಿದ್ಯಾರ್ಥಿಗಳು ಅಳವಾಗಿ ಅಧ್ಯಯನ ಮಾಡಬೇಕು ಎಂದರು.
ಪಾಂಡಿತ್ಯ ಪಡೆದಿದ್ದ ಅಂಬೇಡ್ಕರ್: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಐಪಿಎಸ್ ಅಧಿಕಾರಿ ಎಸ್.ಮರಿಸ್ವಾಮಿ, ಬಾಬಾ ಸಾಹೇಬರು 32ನೇ ವಯಸ್ಸಿಗೆ ಅನೇಕ ವಿಚಾರಗಳಲ್ಲಿ ಪಾಂಡಿತ್ಯ ಗಳಿಸಿದ್ದರು. ಅವರ ಸ್ಮರಣೆಗೆ ನಿಜವಾದ ಗೌರವ ಸಲ್ಲಬೇಕಾದರೆ ಅಂತಹ ಪಾಂಡಿತ್ಯವನ್ನು ಗಳಿಸುವಲ್ಲಿ ಇಂದಿನ ಯುವಪೀಳಿಗೆ ಮುಂದಾಗಬೇಕು ಎಂದು ಆಶಿಸಿದರು.
ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುತ್ತಿರುವ ಕಾರಣ ಅದರ ತಾರತಮ್ಯ ಜೀವಂತವಾಗಿದ್ದು, ಅಂತಹ ಮಾತುಗಳನ್ನು ಬಿಡಬೇಕು. ಸಮಾನತೆ, ಸಹೋದರತ್ವ ಹಾಗೂ ಸ್ವಾತಂತ್ರ್ಯ ಪರಿಕಲ್ಪನೆಯ ಸಮಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಅವರ ತತ್ವ ಹಾಗೂ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗಂಗೋತ್ರಿ ಬಡಾವಣೆಯ ಕುದುರೆಮಾಳದ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು. ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಕೀರ್ತನಕಾರ ಡಾ.ಲಕ್ಷ್ಮಣ್ ದಾಸ್ ಇದ್ದರು. ಸಹಪ್ರಾಧ್ಯಾಪಕಿ ಅಕ್ಕಮಹಾದೇವಿ ಸ್ವಾಗತಿಸಿದರು. ನಂತರ ಜೈಭೀಮ್ ಕಾಮ್ರೇಡ್ ಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. ಮೈಸೂರು ವಿವಿ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಬಾಲಸುಬ್ರಹ್ಮಣ್ಯಂ ಹಾಗೂ ಮಹಾರಾಜ ಕಾಲೇಜು ಪ್ರಾಧ್ಯಾಪಕಿ ಡಾ. ಬಿ.ಎನ್. ಯಶೋದಾ ಇದ್ದರು.