ಓದಲು ಕಷ್ಟಪಡಬೇಡಿ, ಇಷ್ಟಪಡಿ...
ಕ.ಪ್ರ.ವಾರ್ತೆ , ಮೈಸೂರು , ಏ. 22
ಪರೀಕ್ಷೆ ಹತ್ತಿರ ಬರುತ್ತಿದೆ. ಎಷ್ಟು ಓದಿದರೂ ತಲೆಗೆ ಹತ್ತುತ್ತಿಲ್ಲ. ಮನೆಯಲ್ಲಿ ಅಮ್ಮ ಯಾವಾಗಲೂ ಕಷ್ಟಪಟ್ಟು ಓದು ಓದು ಎನ್ನುತ್ತಾರೆ. ಏನಪ್ಪ ಮಾಡೋದು ಎಂದು ಒತ್ತಡದಿಂದ ಕಾಲ ಕಳೆಯುವ ಅನೇಕ ವಿದ್ಯಾರ್ಥಿಗಳ ನೆರವಿಗೆ ಬಂದಿದ್ದಾರೆ ಕಾಟವಾಳು ಶಿವಪ್ಪ.
ಚಿಗುರು ವಿಜ್ಞಾನ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಸರಳೀಕರಿಸುತ್ತಿದ್ದ ಶಿಕ್ಷಕ ಶಿವಪ್ಪ ಇದೀಗ ಓದುವುದು ಹೇಗೆ ಎಂಬುದರ ಕಾರ್ಯಾಗಾರ ನಡೆಸುತ್ತಿದ್ದಾರೆ. 8, 9, 10ನೇ ತರಗತಿಗಳ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಓದಿನಲ್ಲಿ ಉಂಟಾಗುವ ವಿವಿಧ ಸಮಸ್ಯೆಗಳು, ಓದಿದ್ದು ನೆನಪಿನಲ್ಲಿ ಉಳಿಯದಿದ್ದರೆ ಏನು ಮಾಡಬೇಕು ಎಂಬಿತ್ಯಾದಿ ಸಮಸ್ಯೆಗಳಿಗೆ ನಿದರ್ಶನಗಳ ಮೂಲಕ ಪರಿಹಾರ ನೀಡಲು ಪ್ರಯತ್ನಿಸಿದ್ದಾರೆ. ಅವರು ಹೇಳುವ ಮಾತೆಂದರೆ ಕಷ್ಟಪಟ್ಟು ಓದಬೇಡಿ, ಇಷ್ಟು ಪಟ್ಟು ಓದಿ. ಆಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ಸಂದೇಶದೊಂದಿಗೆ ಅನೇಕ ಕಡೆ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ.
ಈಗಾಗಲೇ ರಾಜ್ಯದ ಬೀದರ್, ಧಾರವಾಡ, ಹುಬ್ಬಳ್ಳಿ, ಬೆಂಗಳೂರು, ದಾವಣಗೆರೆ, ಚಾಮರಾಜನಗರ ಮೊದಲಾದ ಕಡೆಗಳಲ್ಲಿ ಅನೇಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಇದೀಗ ಮೈಸೂರಿನ ಗೋಪಾಲಸ್ವಾಮಿ ಶಿಶು ವಿಹಾರದಲ್ಲಿ ಐದು ದಿನಗಳ ಕಾರ್ಯಾಗಾರ ನಡೆಸುತ್ತಿದ್ದಾರೆ. ಪ್ರತಿ ಕಾರ್ಯಾಗಾರದಲ್ಲಿ ಕೇವಲ 30 ಮಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮೊದಲಿಗೆ ಅವರಿಗೆ ಅಭಿಕ್ಷಮತಾ ಪರೀಕ್ಷೆ ನೀಡಿ ಯಾರಲ್ಲಿ ಸಮಸ್ಯೆ ಇದೆ, ಯಾರು ಒತ್ತಡ ಎದುರಿಸುತ್ತಿದ್ದಾರೆ ಎಂಬುದನ್ನು ಪತ್ತೆ ಮಾಡಿ ನಂತರ ಓದಿನ ತಂತ್ರಗಳನ್ನು ಹೇಳಿಕೊಡುತ್ತಾರೆ.
ಅವರ ಪ್ರಕಾರ ಮಕ್ಕಳು ಕಷ್ಟಪಟ್ಟು ಓದುವುದು ಬೇಡ, ಬದಲಾಗಿ ಇಷ್ಟಪಟ್ಟು ಓದಲಿ. ದಿನದ 24 ಗಂಟೆಗಳಲ್ಲಿ ಕೇವಲ 4 ಗಂಟೆ ಓದಿದರೆ ಸಾಕು. ಅದರಲ್ಲಿಯೂ ಬೆಳಗಿನ ಜಾವ 4 ರಿಂದ 7 ಹಾಗೂ ರಾತ್ರಿ 9.30 ರಿಂದ 10.30 ರವರೆಗೆ ಓದುವುದನ್ನು ರೂಢಿಸಿಕೊಳ್ಳಬೇಕು. ಬೆಳಗಿನ ಜಾವ 4 ಗಂಟೆಗೆ ಎದ್ದೇಳುವ ಪರಿಪಾಠ ಮಾಡಿಕೊಳ್ಳಬೇಕು. ಒಂದು ವೇಳೆ ಆಗದಿದ್ದರೆ ಎಡಗೈಗೆ ರಬ್ಬರ್ ಬ್ಯಾಂಡ್ ಹಾಕಿಕೊಂಡು ಅದರಿಂದ ಕೈಗೆ ಎಳೆದು ಬಿಟ್ಟರೆ ಆಗ ನಿದ್ದೆ ಹೋಗುತ್ತದೆ. ನಂತರ ಪುಸ್ತಕದ ಮೇಲಿಟ್ಟರೆ ತೋರು ಬೆರಳನ್ನು ಇಟ್ಟು ಬಾಯಿಬಿಟ್ಟು ಓದಿದರೆ ನೆನಪಿನಲ್ಲಿ ಉಳಿಯುತ್ತದೆ ಎನ್ನುತ್ತಾರೆ.
ಮಕ್ಕಳಲ್ಲಿ ಕಾಡುತ್ತದೆ ಪ್ಲೇಟ್ ರೋಗ: ಇದ್ಯಾವುದು ಹೊಸ ರೋಗ ಎಂದು ಹುಬ್ಬೇರಿಸಬೇಡಿ. ಪ್ಲೇಟ್ (ಕಿಔಆಖಊಿ) ರೋಗ ಎಂದರೆ ಪಿ- ಪೋಸ್ಟ್ಮೂನ್, ಎಲ್- ಲೇಜಿ, ಎ- ಆಬ್ಸೆಂಟ್, ಟಿ- ಟೈಮ್ಸೆನ್ಸ್ ಇಲ್ಲದಿರುವಿಕೆ, ಇ- ಎಕ್ಸ್ಸೈಜ್ ಮಾಡದಿರುವಿಕೆ ತಪ್ಪಿಸುವುದು. ನಂತರ ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಓದಲು ಸಮಯ ನಿಗದಿಪಡಿಸಿಕೊಳ್ಳುವುದು, ಸೂಕ್ತ ವಾತಾವರಣ ಕಲ್ಪಿಸಿಕೊಳ್ಳುವುದು, ಯೋಜನೆ ರೂಪಿಸಿಕೊಳ್ಳುವುದು, ಓದಿದ್ದನ್ನು ಬರೆದಿಟ್ಟುಕೊಳ್ಳುವುದು, ಓದಿನ ಲಿಂಕ್ ಕಲ್ಪಿಸಿಕೊಳ್ಳುವುದು, ಒತ್ತಡ ನಿವಾರಣೆ ಮಾಡಿಕೊಳ್ಳುವುದು, ಕೊನೆಗೆ ಯಶಸ್ಸಿನತ್ತ ಸಾಗುವುದು ಹೀಗೆ ಏನೇಕ ತಂತ್ರಗಳನ್ನು ಹೇಳಿಕೊಡುತ್ತಿದ್ದಾರೆ.
ಇವರು ಮೈಸೂರಿನವರೆ: ಮೂಲತಃ ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ಕಾಟವಾಳು ಗ್ರಾಮದವರಾದ ಶಿವಪ್ಪ ಬಡತನದಲ್ಲಿ ಓದಿ ಬಂದಿದ್ದಾರೆ. ಓದಿದ್ದು ಬಿಎ ಆದರು ವಿಜ್ಞಾನದ ಬಗ್ಗೆ ಎಲ್ಲಿಲ್ಲದ ಆಸಕ್ತಿ. ಚಿಗುರು ವಿಜ್ಞಾನ ಸಂಸ್ಥೆ ಸ್ಥಾಪಿಸಿ ಐದು ಮಂದಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಅಲ್ಲಲ್ಲಿ ಕಾರ್ಯಕ್ರಮ ನೀಡುತ್ತಾರೆ. ಈವರೆಗೆ 18 ಜಿಲ್ಲೆಗಳಲ್ಲಿ 472 ವಿಜ್ಞಾನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟಿದ್ದಾರೆ. ಮೊ. 89717 97901 ಸಂಪರ್ಕಿಸಬಹುದು.
-ಜೆ. ಮಹದೇವ