ಅಡ್ಡಾದಿಡ್ಡಿ ವಾಹನ ನಿಲುಗಡೆ: ತೊಂದರೆ
ಟಿ. ನರಸೀಪುರ: ಪಾದಚಾರಿ ರಸ್ತೆಯನ್ನೇ ಅಕ್ರಮಿಸಿಕೊಂಡು ರಸ್ತೆ ಮಧ್ಯದಲ್ಲಿಯೇ ನಿಲ್ಲುವ ಪ್ರಯಾಣಿಕರ ಆಟೋ, ಕಾರುಗಳು... ಅಡ್ಡಾದಿಡ್ಡಿ ನುಗ್ಗುವ ಬೈಕ್‌ಗಳು... ನಡು ರಸ್ತೆಯಲ್ಲಿ ನಡೆದು ಹೋಗುವ ಪಾದಚಾರಿಗಳು.. ಇದು ಅಭಿವೃದ್ಧಿಗೊಂಡರೂ ರಸ್ತೆ ವಿಭಜಕವಿಲ್ಲದ ಪಟ್ಟಣದ ಲಿಂಕ್ ರಸ್ತೆಯ ಆಧ್ವಾನಗಳು.
ಪಟ್ಟಣಕ್ಕೊಂದೇ ಪೇಟೆ ಬೀದಿ ಎಂಬಂತಿರುವ ಜನದಟ್ಟಣೆ ಸಂಚಾರವಿರುವ ಲಿಂಕ್ ರಸ್ತೆಯಲ್ಲಿ ಸಂಚಾರ ನಿಯಮಗಳ ಪಾಲನೆಯಾಗುತ್ತಿಲ್ಲ. ಜನದಟ್ಟಣೆ ಹಾಗೂ ಅಧಿಕ ಸಂಚಾರ ಹೆಚ್ಚಿರುವುದರಿಂದ ನೂರಾರು ತರಾವರಿ ಕಿರಿಕಿರಿಯನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ವಾಹನ ನಿಲುಗಡೆಗೆ ರಸ್ತೆ ಇಕ್ಕೆಲಗಳಲ್ಲೂ ನಿಲುಗಡೆಗೆ ಜಾಗವೇ ಇಲ್ಲದ್ದರಿಂದ ಸಂಚಾರ ವ್ಯವಸ್ಥೆ ಹದಗೆಡುತ್ತಿದೆ.
ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ನಗರೀಕರಣದೊಂದಿಗೆ ಜನ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ವಾಹನಗಳ ಸಂಚಾರದ ದಟ್ಟಣೆ ಹೆಚ್ಚಾಗುತ್ತಿದೆ. ಬೆಳೆಯುವ ಜನಸಂಖ್ಯೆ ಹಾಗೂ ವಾಹನಗಳ ಸಂಚಾರ ದಟ್ಟಣೆಗೆ ತಕ್ಕಂತೆ ಲಿಂಕ್ ರಸ್ತೆ ವಿಸ್ತಾರವಿಲ್ಲದ್ದರಿಂದ ರಸ್ತೆಯನ್ನು ಆಟೋಗಳು, ಕಾರುಗಳು, ಪುಟ್ಬಾತ್ ವ್ಯಾಪಾರಸ್ಥರು ಆವರಿಸಿಕೊಂಡಿದ್ದಾರೆ. ಅಡ್ಡಾದಿಡ್ಡಿ ವಾಹನಗಳು ಸಂಚರಿಸುವುದರಿಂದ ನಡೆದು ಹೋಗುವ ಜನರಿಗೂ ಕೂಡ ತೊಂದರೆಯಾಗಿದೆ. ಇದುವರೆವಿಗೂ ಅಪಾಯಕಾರಿ ಘಟನೆಗಳು ನಡೆದಿಲ್ಲ. ಅವಘಡ ಸಂಭವಿಸುವ ಮುನ್ನ ಸಂಬಂಧಿಸಿದವರು ಲಿಂಕ್ ರಸ್ತೆ ಅವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಿದೆ.
ರಸ್ತೆ ವಿಭಜಕ ಹಾಕಿಲ್ಲ: ಸಿಎಂಜೆಎಸ್‌ವೈ ಯೋಜನೆಯ ಅನುದಾನದಲ್ಲಿ ಅಭಿವೃದ್ಧಿಗೊಂಡಿರುವ ಲಿಂಕ್ ರಸ್ತೆಗೆ ರಸ್ತೆ ವಿಭಜಕ ಹಾಕಿಲ್ಲದಿರುವುದರಿಂದ ಅಪಘಾತಗಳಿಗೆ ಆಹ್ವಾನ ನೀಡುವಂತಿದೆ. ಪಪಂ ಆಡಳಿತ ಇನ್ನಾದರೂ ರಸ್ತೆಗೆ ವಿಭಜಕ ಅಳವಡಿಸಲು ಮುಂದಾಗಬೇಕಿದೆ.