ಬಣ್ಣಾರಿ ಮಾರಿಯಮ್ಮ ಬಾಯಿಬೀಗ ಉತ್ಸವ
ಟಿ. ನರಸೀಪುರ: ಪಟ್ಟಣದಲ್ಲಿ ಬುಧವಾರ ಬಣ್ಣಾರಿ ಮಾರಿಯಮ್ಮನ ಬಾಯಿಬೀಗ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಗುಂಜಾ ನರಸಿಂಹ ಸ್ವಾಮಿಯ ದೇವಾಲಯ ಮುಂಭಾಗದಿಂದ ಬಣ್ಣಾರಿ ಮಾರಿಯಮ್ಮ ಬಾಯಿಬೀಗ ಉತ್ಸವ ಆರಂಭವಾಯಿತು. ಕಾವೇರಿ ನದಿಯಲ್ಲಿ ಮಡಿ ಮಾಡಿದ ನೂರಾರು ಹರಕೆಯನ್ನು ತೀರಿಸಲು ಹತ್ತಾರು ಅಡಿಗಳ ಬಾಯಿ ಬೀಗವನ್ನು ಧರಿಸಿ ನಡೆದು ಭಕ್ತಿಭಾವ ಮೆರೆದದ್ದು ನೋಡುಗರಿಗೆ ಮೈನವಿರೆಳೆಸುವಂತಿತ್ತು.
ವಿಶ್ವಕರ್ಮ ಬೀದಿ, ಪಪಂ ಕಚೇರಿ ಮುಂಭಾಗದ ರಸ್ತೆ ಹಾಗೂ ತಾಲೂಕು ಕಚೇರಿ ರಸ್ತೆ ಮೂಲಕ ಎನ್ಎಚ್ 212ರ ಜಂಕ್ಷನ್ನಲ್ಲಿರುವ ದೇವಾಲಯಕ್ಕೆ ಬಾಯಿ ಬೀಗ ಉತ್ಸವ ತಲುಪಿತು. ಆರ್ಯವೈಶ್ಯ ವಾಣಿಯಾರ್ ಸಂಘ ಕಳೆದ 69 ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವ ಬಣ್ಣಾರಿ ಮಾರಿಯಮ್ಮನ ಉತ್ಸವ ಈ ಬಾರಿಯೂ ವಿಜೃಂಭಣೆಯಿಂದ ನಡೆಯಿತು. ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಭಕ್ತರು ಬಾಯಿ ಬೀಗ ಉತ್ಸವದಲ್ಲಿ ಭಾಗವಹಿಸಿದ್ದರು.