ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮದಕರಿ ನಾಯಕಗೆ ಅಪಮಾನ: ಆರೋಪಿಗಳ ಬಂಧನಕ್ಕೆ ಆಗ್ರಹ

Mainashree
Updated On : 24 Apr 2014, 12:13 pm

ಕ.ಪ್ರ.ವಾರ್ತೆ  ಟಿ.ನರಸೀಪುರ  ಏ. 23
ತಾಲೂಕಿನ ಆಲಗೂಡು ಗ್ರಾಮದಲ್ಲಿ ರಾಜ ವೀರ ಮದಕರಿ ನಾಯಕರ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿರುವ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ, ಅವರನ್ನು ಬಂಧಿಸಿ, ರಾಜ್ಯದಿಂದಲೇ ಗಡಿಪಾರು ಮಾಡಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್ ಒತ್ತಾಯಿಸಿದ್ದಾರೆ. ಹಬ್ಬದ ಸಂದರ್ಭವನ್ನು ಹೊಂಚು ಹಾಕಿಕೊಂಡು, ಗ್ರಾಮೀಣ ಪ್ರದೇಶದಲ್ಲಿ ಸಂಘರ್ಷದ ಕಿಚ್ಚನ್ನು ಹೊತ್ತಿಸಲೆಂದೇ ಕೆಲವು ಕಿಡಿಗೇಡಿಗಳು ಆಲಗೂಡು ಗ್ರಾಮದಲ್ಲಿ ನಾಡಿನ ರಾಜ ಪರಂಪರೆಯ ಮೇರು ಪರ್ವತದಂತಿರುವ ಮದಕರಿ ನಾಯಕರ ನಾಮಫಲಕಕ್ಕೆ ಅವಮಾನ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಚುನಾವಣೆಯ ವೇಳೆ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ಮತೀಯ ಗಲಭೆ ಸೃಷ್ಟಿಸುವ ದುಷ್ಕರ್ಮಿಗಳು ಯಾರೇ ಆಗಿದ್ದರೂ ಅವರನ್ನು ಬಂಧಿಸಿ, ಕಾನೂನಿನಡಿ ಶಿಕ್ಷೆಗೆ ಒಳಪಡಿಸಬೇಕೆಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಆಲಗೂಡಿನಲ್ಲಿ ಈಗಾಗಲೇ ಕ್ಷುಲ್ಲಕ ಕಾರಣಕ್ಕೆ ಪ.ಜಾತಿ ಹಾಗೂ ಪಂಗಡ ಸಮುದಾಯಗಳ ನಡುವೆ ಎರಡು ಭಾರಿ ಗಲಭೆ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಮದಕರಿ ನಾಯಕ ಸಂಘದ ನಾಮಫಲಕಕ್ಕೆ ಅವಮಾನ ಮಾಡಿ, ಮತ್ತೊಮ್ಮೆ ಕೋಮು ಸಾಮರಸ್ಯ ಕದಡುವ ಹುನ್ನಾರ ಕಿಡಿಗೇಡಿಗಳ್ಯಾರೋ ಮಾಡಿದಂತಿದೆ. ಇಪ್ಪತ್ತು ದಿನಗಳ ಹಿಂದೆ ಇಂಡವಾಳು ಗ್ರಾಮದಲ್ಲಿ ಚಪ್ಪಲಿ ಹಾರ ಹಾಕಿ, ಮಳವಳ್ಳಿ ತಾಲೂಕಿನ ರಾವಣಿ ಗ್ರಾಮದಲ್ಲಿ ಸಗಣಿ ಎರಚಿ ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿರುವ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ ಎಂದು ಆರೋಪಿಸಿದರು.
ಮಂಡ್ಯ ಜಿಲ್ಲೆಯ ರಾಗಿಬೊಮ್ಮನಹಳ್ಳಿ ಗ್ರಾಮದ ದಲಿತರ ಮೇಲೆ ದೌರ್ಜನ್ಯ ನಡೆಸಿದವರನ್ನು ಪೊಲೀಸರು ಬಂಧಿಸಿಲ್ಲ. ಇನ್ನಾದರೂ ಸರ್ಕಾರ ಗಮನ ಹರಿಸಿ ಇಂತಹ ಘಟನೆಗಳು ನಡೆಯುವುದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ದಸಂಸ ಮುಖಂಡರಾದ ಶಿವಣ್ಣ, ಸೋಮಣ್ಣ, ಮಹದೇವಸ್ವಾಮಿ, ಮಾದಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement