ರೋಗಿಗಳಿಗೆ ಸಹಾಯ ಹಸ್ತ ಚಾಚಿ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಏ. 23
ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ವೈದ್ಯರೂ ರೋಗಿಗಳನ್ನು ಕಾಯಿಸದೆ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಿ, ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಹಾಗೂ ಹೊರಗಿನ ಔಷಧಿ ಅಂಗಡಿಗಳಿಗೆ ಚೀಟಿ ಬರೆಯಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪುಟ್ಟಸ್ವಾಮಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಪ್ರತಿ ವೈದ್ಯರು ಸಹ ಬೆಳಿಗ್ಗೆ 9 ಹಾಗೂ ಸಂಜೆ 4ಕ್ಕೆ ಕಡ್ಡಾಯವಾಗಿ ಹಾಜರಿ ಪುಸ್ತಕದಲ್ಲಿ ಸಹಿ ಪಡೆಯುವಂತೆ ಆಡಳಿತ ವೈದ್ಯಾಧಿಕಾರಿ ಡಾ. ತ್ರಿವೇಣಿ ಅವರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿರುವ ಬಗ್ಗೆ ಸಾರ್ವಜನಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ನಾನ್ ಕ್ಲಿನಿಕಲ್ ಗುತ್ತಿಗೆ ಪಡೆದಿದ್ದ ಮೈಸೂರಿನ ರಂಗನಾಥ ಎಂಟರ್ಪ್ರೆಸೈಸ್ ಗುತ್ತಿಗೆ ಅವಧಿ ಮಾ.30ಕ್ಕೆ ಮುಗಿದಿದೆ. ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಹೊಸದಾಗಿ ನಾನ್ ಕ್ಲಿನಿಕಲ್ ಗುತ್ತಿಗೆ ನೀಡಲಾಗುವುದು. ಅಲ್ಲಿಯವರೆಗೆ ಹಿಂದಿನ ಗುತ್ತಿಗೆದಾರರೇ ನಾನ್ ಕ್ಲಿನಿಕಲ್ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ರೇಡಿಯಾಜಲಿಸ್ಟ್ ನೇಮಿಸಿ: ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾ ಸರ್ಜನ್ ಮತ್ತು ರೇಡಿಯಾಜಲಿಸ್ಟ್ ಇಲ್ಲದೆ ರೋಗಿಗಳು ಆಪರೇಷನ್ಗಳಿಗೆ ಮೈಸೂರಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತುರ್ತಾಗಿ ಅವರನ್ನು ನೇಮಿಸುವಂತೆ ಸಾರ್ವಜನಿಕರು ಮನವಿ ಮಾಡಿದರು.
ವೈದ್ಯರಾದ ಡಾ. ಸದಾಶಿವ, ಡಾ. ಶಿವಪ್ರಸಾದ್, ಡಾ. ಮಹದೇವಸ್ವಾಮಿ, ಡಾ. ಚಂದ್ರಕಲಾ, ಡಾ. ತೇಜಸ್, ವ್ಯವಸ್ಥಾಪಕ ನಾಗೇಶ್, ಕರ್ನಾಟಕ ಕಾವಲುಪಡೆಯ ತಾಲೂಕು ಅಧ್ಯಕ್ಷ ಸುಬ್ರಮಣಿ, ಮುಖಂಡರಾದ ಶಿವರಾಜ್, ಶಿವು ಮತ್ತಿತರರು ಉಪಸ್ಥಿತರಿದ್ದರು.