'ವಿದ್ಯಾರ್ಥಿ ನಡತೆ ಮಾದರಿಯಾಗಿರಲಿ'
ಕ.ಪ್ರ.ವಾರ್ತೆ ಕೆ.ಆರ್. ನಗರ ಏ. 23
ವಿದ್ಯಾರ್ಥಿಗಳ ನಡತೆ ಸಮಾಜಕ್ಕೆ, ಪೋಷಕರಿಗೆ ಕಂಟಕವಾಗದೆ ಭವಿಷ್ಯದ ಭಾರತಕ್ಕೆ ಸದುಪಯೋಗ ಮತ್ತು ಇತರರಿಗೆ ಮಾದರಿಯಾಗಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಾರ್ಯದರ್ಶಿ ಪಾಂಡುರಂಗೇಗೌಡ ಹೇಳಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ನಡೆದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮತ್ತು ಕಾಲೇಜಿಗೆ ಒಳ್ಳೆಯ ವಿದ್ಯಾರ್ಥಿಗಳಾಗುವುದರ ಜತೆಗೆ, ಸ್ಪರ್ಧಾತ್ಮಕ ಯುಗದಲ್ಲಿ ಓದಿನ ಕಡೆಗೆ ಹೆಚ್ಚು ಗಮನಹರಿಸಿ ಉತ್ತಮ ಅಂಕಗಳಿಸಿ ಉನ್ನತ ವ್ಯಾಸಂಗ ಮಾಡಿ ಸತ್ಪ್ರಜೆಗಳಾಗಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಾಂಶುಪಾಲ ಕೆ.ಆರ್. ದೀಕ್ಷಿತ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆ.ಟಿ.ರಮೇಶ್, ಮೋಹನಕುಮಾರಿ, ಉಪನ್ಯಾಸಕರಾದ ಡಾ.ಮಂಜುರಾಜು, ಸುನಿಲ್, ಮಂಜುನಾಥ್ ಇದ್ದರು.