ವಿದ್ಯುತ್ ಕಾಮಗಾರಿ ಸ್ಥಗಿತಕ್ಕೆ ಮನವಿ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಏ. 23
ಕೈಗಾದಿಂದ ಕೇರಳದ ಕೋಜಿಕೋಡ್‌ಗೆ 400 ಕೆವಿ ವಿದ್ಯುತ್ ಮಾರ್ಗ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರಿಗೆ ರಾಜ್ಯ ರೈತ ಸಂಘ-ಹಸಿರು ಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು.
ಈ ವಿದ್ಯುತ್ ಮಾರ್ಗಕ್ಕಾಗಿ ಮೈಸೂರು, ಕೊಡಗು ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಪರಿಸರಕ್ಕೆ ಧಕ್ಕೆ ಉಂಟಾಗುತ್ತದೆ. ಜೊತೆಗೆ ಕಾವೇರಿ ನದಿ ನೀರು ಉಗಮಕ್ಕೂ ತೊಂದರೆಯಾಗುತ್ತದೆ.
ಇದರಿಂದಾಗಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಹೋರಾಟ ನಡೆಯುತ್ತಿದೆ. ಕಳೆದೂ ಒಂದೂವರೆ ತಿಂಗಳಿಂದ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಸತ್ಯಾಗ್ರಹ ನಡೆಯುತ್ತಿದೆ. ಮುಖ್ಯಮಂತ್ರಿಯವರ ಸೂಚನೆ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತವಾಗಿತ್ತು ಎಂದು ರೈತರು ತಿಳಿಸಿದರು.
ಆದರೆ, ಈಗ ಪೊಲೀಸರ ರಕ್ಷಣೆಯಡಿ ಕಾಮಗಾರಿ ಮತ್ತೆ ಆರಂಭಿಸಿದ್ದಾರೆ. ಇದನ್ನು ವಿರೋಧಿಸಿದ ಚಳವಳಿಗಾರರನ್ನು ಬಂಧಿಸಿದ್ದಾರೆ. ಇದರ ವಿರುದ್ಧವೂ ಕೊಡಗು ಮತ್ತು ಮಂಡ್ಯದಲ್ಲಿ ಚಳವಳಿ ನಡೆದಿದೆ. ಕಾಮಗಾರಿ ಆರಂಭವಾಗಿರುವುದರಿಂದ ಗುರುವಾರದಿಂದ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ಹೇಳಿದರು.
ಈಗಾಗಲೇ ಈ ಕಾಮಗಾರಿ ಬಗ್ಗೆ ವಿವಾದ ಎದ್ದಿದ್ದು, ಬದಲಿ ಮಾರ್ಗಗು ಸಹ ಇವೆ. ಹೀಗಾಗಿ ಮರಗಳನ್ನು ಉಳಿಸುವ ದೃಷ್ಟಿಯಿಂದ ಕಾಮಗಾರಿ ಬಗ್ಗೆ ಜಿಲ್ಲಾಡಳಿತ ಅಥವಾ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಬೇಕು. ಅದುವರೆಗೂ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಕೆ.ಎಸ್. ನಂಜುಂಡೇಗೌಡ ಮತ್ತಿತರರು ಉಪಸ್ಥಿತರಿದ್ದರು.