ಕರ್ಜನ್ ಉದ್ಯಾನಕ್ಕೆ ಡಾ.ರಾಜ್, ವಿಷ್ಣು ಹೆಸರು
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಏ. 24
ಅರಮನೆ ಉತ್ತರ ದ್ವಾರದ ಬಳಿಯ ಕರ್ಜನ್ ಉದ್ಯಾನಕ್ಕೆ ಡಾ.ರಾಜಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಹೆಸರಿಡುವ ಸಂಬಂಧ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.
ಡಾ.ರಾಜಕುಮಾರ್ ಉದ್ಯಾನದಲ್ಲಿ ಗುರುವಾರ ನಡೆದ ಡಾ.ರಾಜಕುಮಾರ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ನಂತರ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದರು.
ಒಂದು ಉದ್ಯಾನಕ್ಕೆ ಡಾ.ರಾಜ್‌ಕುಮಾರ್ ಹೆಸರಿಡುವ ಪ್ರಸ್ತಾವ ಈಗಾಗಲೆ ಪಾಲಿಕೆ ಮುಂದೆ ಇದೆ. ಈ ವಿಷಯದಲ್ಲಿ ಯಾರೂ ಅಡ್ಡಿಪಡಿಸುವುದಿಲ್ಲ. ಅಂತೆಯೇ ಡಾ.ರಾಜ್ ಉದ್ಯಾನದ ಎದುರಿನ ಉದ್ಯಾನಕ್ಕೆ ಡಾ. ವಿಷ್ಣುವರ್ಧನ್ ಹೆಸರಿಡಲಾಗುವುದು. ಶೀಘ್ರದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಾಗಿ ಹೇಳಿದರು.
ತನ್ನ ಅಭಿಮಾನಿಗಳನ್ನು ದೇವರು ಎಂದು ಕರೆದ ಏಕೈಕ ವ್ಯಕ್ತಿ ಡಾ.ರಾಜ್‌ಕುಮಾರ್. ಅವರು ತಮ್ಮ ಜೀವನದ ಕಷ್ಟದ ಕಾಲದಲ್ಲಿ ಅಭಿಮಾನಿಗಳು ನನ್ನನ್ನು ಮೇಲೆತ್ತಿದ್ದಾರೆ ಎಂದು ತಿಳಿದು ಅಭಿಮಾನಿ ದೇವರು ಎಂದು ಕರೆದಿದ್ದರು. ನಟ ಸಾರ್ವಭೌಮ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದರು. ಯಾವುದೇ ಪಾತ್ರವಾದರೂ ಜೀವತುಂಬಿ ಅಭಿನಯಿಸುತ್ತಿದ್ದ ಅವರು ಅತಿ ವಿರಳ ಕಲಾವಿದರು. ಅಂತಹ ವ್ಯಕ್ತಿಯ ಸ್ಮರಣೆಯನ್ನು ಮಾಡಬೇಕಾದ ಅಗತ್ಯವಿದೆ. ಅವರ ಜೀವನ, ತತ್ವಾದರ್ಶಗಳು ನಮಗೆ ಮಾರ್ಗದರ್ಶಕವಾಗಿವೆ ಎಂದರು.
ನೀರಿಗೆ ಕೊರತೆ ಆಗದಂತೆ ಕ್ರಮ: ಮುಂಗಾರು ದುರ್ಬಲಗೊಂಡ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಕೆರೆ ನೀರು ಮತ್ತು ನದಿ ಮೂಲಗಳಿಂದ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವ ಜೊತೆಗೆ, ಸಾರ್ವಜನಿಕರು ಗುಳೆ ಹೋಗದಂತೆ ಮತ್ತು ಜಾನುವಾರಿಗೆ ನೀರಿನ ತೊಂದರೆ ಎದುರಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಡಾ.ರಾಜಕುಮಾರ್ ಉದ್ಯಾನದಲ್ಲಿನ ಡಾ.ರಾಜಕುಮಾರ್ ಅವರ ಪ್ರತಿಮೆಗೆ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಬಳಿಕ ಗಾಯಕ ಗಂಗೋತ್ರಿ ರಂಗಸ್ವಾಮಿ ಮತ್ತು ತಂಡದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಕೆ.ಆರ್. ವೃತ್ತದಲ್ಲಿ ಡಾ. ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸಿದರು.
ಮೇಯರ್ ಎನ್.ಎಂ. ರಾಜೇಶ್ವರಿ, ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಮಾಜಿ ಉಪ ಮೇಯರ್ ಎಂ.ಜೆ. ರವಿಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬಿ.ಪಿ.ಮಂಜುನಾಥ್, ಆರ್. ರಘು, ಕಾಂಗ್ರೆಸ್ ಮುಖಂಡ ಎಂ.ಶಿವಣ್ಣ, ಅಮೋಘ್ ವಾಹಿನಿ ಮುಖ್ಯಸ್ಥ ಬಿಳಿಗಿರಿ ರಂಗನಾಥ್, ಕನ್ನಡಪರ ಹೋರಾಟಗಾರ ಬಿ.ಎ.ಶಿವಶಂಕರ್, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಇದ್ದರು.