ಮೀಸಲು ವ್ಯವಸ್ಥೆಯಡಿ ದಿವಾನರಾದ ಸರ್ ಎಂವಿ
ಮೈಸೂರು: ಸರ್ ಎಂ.ವಿಶ್ವೇಶ್ವರಯ್ಯ ಅವರು ಮೀಸಲಾತಿಯಲ್ಲಿ ದಿವಾನರಾದರು. ನಂತರ ಅವರೇ ಮೀಸಲಾತಿ ವಿರೋಧಿಸಿ ದಿವಾನ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು ಎಂದು ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಹೇಳಿದರು.
ಮೈಸೂರು ವಿವಿ ಮಾನಸಗಂಗೋತ್ರಿ ಸಮಾಜಶಾಸ್ತ್ರ ಅಧ್ಯಯನ ವಿಭಾಗವು ಶುಕ್ರವಾರ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿಯಲ್ಲಿ ದಲಿತರು, ಹಿಂದುಳಿದ ವರ್ಗ ಮತ್ತು ಮಹಿಳೆಯರಿಗೆ ಡಾ.ಅಂಬೇಡ್ಕರ್ ಅವರ ಕೊಡುಗೆ ಕುರಿತು ಅವರು ಉಪನ್ಯಾಸ ನೀಡಿದರು.
ಮೈಸೂರು ಅರಸರ ಆಳ್ವಿಕೆಯಲ್ಲಿ ತಮಿಳುನಾಡು ಮೂಲದ ಬ್ರಾಹ್ಮಣರು ದಿವಾನರಾಗುತ್ತಿದ್ದರು. ಇವರು ತಮಿಳುನಾಡಿನ ತಂಜಾವೂರಿನಲ್ಲಿ ನೂರಾರು ಎಕರೆ ಜಮೀನು ಹೊಂದಿದ್ದರು. ಇದರಿಂದಲೇ ಕಾವೇರಿ ಸಮಸ್ಯೆ, ನೀರು ಹಂಚಿಕೆಯಲ್ಲಿ ತಮಿಳುನಾಡು ಪರವಾಗಿತ್ತು. ಈ ವೇಳೆ ಕರ್ನಾಟಕದವರನ್ನು ದಿವಾನರಾಗಿ ಮಾಡುವಂತೆ ಬ್ರಾಹ್ಮಣರು ಹೋರಾಟ ಮಾಡಿದರು. ಇದರ ಫಲವಾಗಿ ಮದ್ರಾಸ್‌ನಲ್ಲಿ ಎಂಜಿನಿಯರ್ ಆಗಿದ್ದ ವಿಶ್ವೇಶ್ವರಯ್ಯ ಅವರನ್ನು ರಾಜರು ಮುಖ್ಯ ಎಂಜಿನಿಯರ್ ಆಗಿ ನೇಮಿಸಿದರು. ಬಳಿಕ ದಿವಾನರಾದರು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿ ತರಲು ಹೊರಟರು. ಇದನ್ನು ವಿರೋಧಿಸಿ ವಿಶ್ವೇಶ್ವರಯ್ಯ ಅವರು ದಿವಾನ ಸ್ಥಾನಕ್ಕೆ ರಾಜಿನಾಮೆ ನೀಡಿದರು. ವಿಶ್ವೇಶ್ವರಯ್ಯ ದಿವಾನ ಸ್ಥಾನಕ್ಕೆ ರಾಜಿನಾಮೆ ನೀಡಿದ 13 ವರ್ಷಗಳ ನಂತರ ಕನ್ನಂಬಾಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿತು. ಈ ಅಣೆಕಟ್ಟು ಕಟ್ಟಲು ವಿಶ್ವೇಶ್ವರಯ್ಯ ಅವರು ಎಂಜಿನಿಯರ್ ಆಗಿ ಶ್ರಮಿಸಿದ್ದಾರೆ. ಆದರೆ, ಅಣೆಕಟ್ಟು ಕಟ್ಟಿಸಿದವರು ರಾಜರು. ಹೀಗಾಗಿಯೇ ಕೃಷ್ಣರಾಜ ಸಾಗರ ಅಣೆಕಟ್ಟು ಎಂದು ಹೆಸರಿಸಲಾಗಿದೆ ಎಂದು ತಿಳಿಸಿದರು.
ಲಿಂಗಾಯಿತರು ಶೂದ್ರರಲ್ಲ: ಶೂದ್ರ ಎಂದರೆ ದಲಿತರು ಎಂಬ ತಪ್ಪು ಭಾವನೆ ಇದೆ. ವೈದ್ಯಕೀಯ ಧರ್ಮದ ಪ್ರಕಾರ ಶೂದ್ರ ಎಂದರೆ ಎಲ್ಲ ಜಾತಿಗಳು ಸೇರುತ್ತವೆ. ಲಿಂಗಾಯಿತರು ಮಾತ್ರ ಪ್ರತ್ಯೇಕ ಧರ್ಮ ಹೊಂದಿದ್ದು, ಬಸವಣ್ಣ ಅವರ ತತ್ವಗಳನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಲಿಂಗಾಯಿತರು ಶೂದ್ರ ವರ್ಗಕ್ಕೆ ಸೇರುವುದಿಲ್ಲ. ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ. ಒಬ್ಬರ ಮೇಲೆ ಒಬ್ಬರು ಇರುವುದಕ್ಕಿಂತ, ಒಬ್ಬರ ಪಕ್ಕ ಮತ್ತೊಬ್ಬರು ಇದ್ದರೆ ಸಮಾನತೆ ಆಗಲು ಸಾಧ್ಯ ಎಂದರು.
ನಮ್ಮ ಪಠ್ಯಪುಸ್ತಕಗಳಲ್ಲಿ ಬುದ್ಧನ ಕುರಿತು ಸರಿಯಾದ ಮಾಹಿತಿ ಇಲ್ಲ. ಬುದ್ಧ ತಪ್ಪಿತಸ್ಥ ಎಂಬಂತೆ ಚಿತ್ರಿಸಲಾಗಿದೆ. ಬುದ್ಧ ಸಮಾನತೆಗಾಗಿ ಹೋರಾಟ ನಡೆಸಿದರು. ತಾರತಮ್ಯ ಹೊಂದಿರುವ ಹಿನ್ನೆಲೆಯಲ್ಲಿ ಮನುಸ್ಮೃತಿಯನ್ನು ಡಾ.ಅಂಬೇಡ್ಕರ್ ಸುಟ್ಟು ಹಾಕಿದ್ದರು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ ಟೀಕಿಸಿದ್ದಾರೆ. ಬ್ರಾಹ್ಮಣರು ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಅಜ್ಞಾನದ ಕತ್ತಲಲ್ಲಿ ಇರಿಸಿದ್ದಾರೆ ಎಂದು ಕಿಡಿಕಾರಿದರು.
ಎಲ್ಲ ಮತ ಸ್ಥಾಪಕರು ಸುಳ್ಳು ಹೇಳಿದ್ದಾರೆ. ಆದರೆ, ಬುದ್ಧ ಒಬ್ಬರು ಮಾತ್ರ ಸತ್ಯ ಹೇಳಿದ್ದಾರೆ. ನಮ್ಮ ದೇಶಕ್ಕೆ ಬೌದ್ಧ ಧರ್ಮ ಪರಿಹಾರ. ಹೀಗಾಗಿಯೇ ಅಂಬೇಡ್ಕರ್ ಅವರು ಸಹ ಬೌದ್ಧ ಧರ್ಮಕ್ಕೆ ಸೇರಿದರು. ಕರ್ನಾಟಕದ ಒಕ್ಕಲಿಗರು ಸೇರಿದಂತೆ ದೇಶದ ಎಲ್ಲ ರೈತ ಬಾಂಧವರು ಬೌದ್ಧ ಧರ್ಮಕ್ಕೆ ಸೇರಿದವರು. ಹೀಗಾಗಿಯೇ, ನಮ್ಮ ಒಕ್ಕಲಿಗರು ನಿರ್ವಾಣಗೌಡ ಎಂದು ಹೆಸರಿಟ್ಟುಕೊಳ್ಳುತ್ತಾರೆ. ಎಲ್ಲ ಜಾತಿಯವರೂ ಮಹಾಪುರುಷರನ್ನು ಹೊಂದಿದ್ದಾರೆ. ಆದರೆ, ಮಹಾಪುರುಷ ಎಂದು ಯಾರನ್ನೂ ಸ್ವೀಕರಿಸಿಲ್ಲ. ಬೌದ್ಧ ಧರ್ಮದಲ್ಲಿ ಸಂಪೂರ್ಣ ಪ್ರಜಾಪ್ರಭುತ್ವ ಇದೆ. ಬೌದ್ಧ ಧರ್ಮ ಸ್ಥಾಪನೆಯಾಗಿ 2600 ವರ್ಷಗಳಾದರೂ ಮೂಲಭೂತವಾದ ಬೆಳೆದಿಲ್ಲ. ಆದರೆ, ಉಳಿದ ಧರ್ಮಗಳಲ್ಲಿ ಮೂಲಭೂತವಾದ ಬೆಳೆದಿದೆ ಎಂದು ಪ್ರೊ.ಭಗವಾನ್ ಹೇಳಿದರು.ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಬಿ. ಗುರುರಾಜ್, ಡಾ.ಎಸ್. ಯಶೋಧ ಇದ್ದರು. ಆಶಾ ಸ್ವಾಗತಿಸಿದರು.